ಕರಾವಳಿ

ಉಜಿರೆಯಲ್ಲಿ ಮೊಳಗಿದ ನಮೋ ಘೋಷಣೆ : ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನಿಗೆ ಮನವಿ

Pinterest LinkedIn Tumblr

ಬೆಳ್ತಂಗಡಿ, ಆಕ್ಟೋಬರ್.29: ಪ್ರಧಾನಿ ಮೋದಿಯವರು ಇಂದು ಬೆಳಿಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥ ಸ್ವಾಮಿ ದರ್ಶನ ಪಡೆದು ಬಳಿಕ ಉಜಿರೆಯ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ಬೃಹತ್ ಸಮಾವೇಶದಲ್ಲಿ ಪ್ರಧಾನಿಯವರು ಪಾಲ್ಗೊಂಡರು.

ಜನಧನ್ ಯೋಜನೆಯಡಿ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು 12 ಲಕ್ಷಕ್ಕೂ ಹೆಚ್ಚು ಖಾತೆ ತೆರೆದಿದ್ದು, ಸಮಾವೇಶದಲ್ಲಿ ಮೋದಿ ಸದಸ್ಯರಿಗೆ ರೂಪೇ ಕಾರ್ಡ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾವೇಶದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು.

ಡಾ. ವೀರೇಂದ್ರ ಹೆಗ್ಗಡೆಯವರು ತುಳು ಭಾಷೆಯಲ್ಲಿಯೇ ಪ್ರಧಾನಿಯವರಿಗೆ ಸ್ವಾಗತ ಕೋರಿದರು. ತುಳು ಭಾಷೆಗೆ ಮಾನ್ಯತೆ ನೀಡಲು ಕ್ರಮ ಕೈಗೊಳ್ಳುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು.

ನಮ್ಮ ತುಳು ಭಾಷೆಗೆ ಇನ್ನೂ ಸಂವಿಧಾನದ 8ನೆ ಪರಿಚ್ಛೇದದಲ್ಲಿ ಸ್ಥಾನ ದೊರೆತಿಲ್ಲ. ಕಳೆದ ಹಲವು ಸಮಯಗಳಿಂದ ಈ ಬಗ್ಗೆ ತುಳುನಾಡಿನ ಜನರು ಬೇಡಿಕೆಯಿಡುತ್ತಿದ್ದಾರೆ. ಈ ಬಗ್ಗೆ ದಿಲ್ಲಿಗೆ ಬಂದೂ ಮನವಿ ಸಲ್ಲಿಸಿದ್ದೇನೆ. ಆದ್ದರಿಂದ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ಡಾ.ಹೆಗ್ಗಡೆ ಪ್ರಧಾನಿಯವರನ್ನು ವಿನಂತಿಸಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲಕ್ಷಾಂತರ ಮಂದಿ ಜೈಕಾರ ಕೂಗುವ ಮೂಲಕ ಮನವಿಗೆ ಬೆಂಬಲ ಸೂಚಿಸಿದರು.

ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಹಲವಾರು ಬದಲಾವಣೆಗಳಾಗಿವೆ. ಅದನ್ನು ಗುರುತಿಸಲು ಸಾಧ್ಯವಾಗುತ್ತದೆ. ನೀವು ಒಂದು ಜಾಗೃತ ಭಾರತವನ್ನು ಕಟ್ಟಿದ್ದೀರಿ. ನಿಮ್ಮ ವಿಶನ್ 2025 ಹೊಸ ಬದಲಾವಣೆಗಳನ್ನು ತರುತ್ತಿದೆ ಎಂದು ಪ್ರಧಾನಿ ಮೋದಿಯವರನ್ನು ಡಾ.ವೀರೇಂದ್ರ ಹೆಗ್ಗಡೆ ಕೊಂಡಾಡಿದರು.

ಉಜಿರೆಯಲ್ಲಿ ಮೊಳಗಿದ ನಮೋ ಘೋಷಣೆ

ಸ್ವಾಗತ ಮತ್ತು ಪ್ರಸ್ತಾವನೆಗೈಯುವ ಮುನ್ನ ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೆರೆದಿದ್ದ ಸಭಿಕರಲ್ಲಿ ಮೂರು ಸಲ ನಮೋ ಮಂತ್ರ ಪಠಿಸಿದರು. ಲಕ್ಷಕೂ ಹೆಚ್ಚು ಮಂದಿಓಂ ಮಂಜುನಾಥ ನಮೋ ನಮ: ಎಂಬ ಘೋಷಣೆ ಕೂಗಿದರು.

ಇದೇ ಸಂದರ್ಭದಲ್ಲಿ ಕಂಬಳದ ನೊಗದ ಮಾದರಿ ಉಡುಗೊರೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರಧಾನಿ ಮೋದಿಗೆ ಸಮರ್ಪಣೆ ಮಾಡಿದರು.

ವೇದಿಕೆಯಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದ ಗೌಡ, ಸಂಸದರಾದ ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲು, ಶಾಸಕ ಕೆ.ವಸಂತ ಬಂಗೇರ ಮುಂತಾದವರು ಉಪಸ್ಥಿತರಿದ್ದರು.

Comments are closed.