ಕರಾವಳಿ

ಪ್ರಧಾನಿ ಮೋದಿ ಆಗಮನಕ್ಕೆ ಕ್ಷಣಗಣನೆ..ರಸ್ತೆ ಉದ್ದಕ್ಕೂ ಅಲಂಕಾರ – ಬಿಗಿ ಭದ್ರತೆ : ನಾಳೆ ಮೋದಿಯವರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸರ್ವಪೂಜೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್ 28: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ ಅವರ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅವರ ಸ್ವಾಗತಕ್ಕಾಗಿ ಧರ್ಮಸ್ಥಳ ಶ್ರೀ ಕ್ಷೇತ್ರ ಸಜ್ಜಾಗಿದೆ. ಪ್ರದಾನಿ ಮೋದಿ ಅವರು ಮೊದಲ ಬಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸುತ್ತಿ ರುವುದರಿಂದ ಕ್ಷೇತ್ರದಲ್ಲಿ ಹಬ್ಬದ ವಾತವರಣ ಮೂಡಿದ್ದು, ಮೋದಿಯನ್ನು ತುಳುನಾಡಿನ ಶೈಲಿಯಲ್ಲಿ ಸ್ವಾಗತಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಜಿಲ್ಲೆ ಸಜ್ಜಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ತುಳು ಸಂಸ್ಕೃತಿ ಪರಂಪರೆಯಂತೆ ಸ್ವಾಗತ ಕೋರಲು ಭರದ ಸಿದ್ಧತೆ ನಡೆಸಲಾಗುತ್ತಿದೆ.

ಪ್ರಧಾನಿ ಮೋದಿ ಭಾನುವಾರ ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳ ತಲುಪಲಿದ್ದಾರೆ. ಹೆಲಿಪ್ಯಾಡ್ ನಿಂದ ಮೋದಿ ಅವರು ಶ್ರೀ ಕ್ಷೇತ್ರಕ್ಕೆ ವಿಶೇಷ ಕಾರಿನಲ್ಲಿ ತೆರಳಲಿದ್ದು, ಅದಕ್ಕಾಗಿ 9 ವಿಶೇಷ ಕಾರುಗಳು ಈಗಾಗಲೇ ಧರ್ಮಸ್ಥಳಕ್ಕೆ ಆಗಮಿಸಿವೆ.

ಈಗಾಗಲೇ ಧರ್ಮಸ್ಥಳದ ನೂತನ ಹೆಲಿಪ್ಯಾಡ್ ಗೆ ವಾಯುಸೇನಾ ಮತ್ತು ಎಸ್ ಜಿ ಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಧರ್ಮಸ್ಥಳದ ಬಳಿಯ ಉಜಿರೆಯಲ್ಲಿ ಬ್ಯಾಟ್ ನಿರ್ಮಿಸಲಾಗಿದೆ. ಪೊಲೀಸರು ಹಾಗೂ ಎಸ್ ಪಿಜಿ ಕಮಾಂಡೋಗಳು ಹೆಲಿಪ್ಯಾಡ್ ಮತ್ತು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ರಸ್ತೆಯ ಇಕ್ಕೆಲಗಳಲ್ಲಿ ತಪಾಸಣೆ ಆರಂಭಿಸಿದ್ದಾರೆ.

ಅಕ್ಟೋಬರ್ 29 ರಂದು ಬೆಳಿಗ್ಗೆ 11:30ಕ್ಕೆ ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೆ ಪ್ರದಾನಿ ಭೇಟಿ ನೀಡಲಿದ್ದಾರೆ. ಬಳಿಕ ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕುಗಳ ಸಹಭಾಗಿತ್ವದಲ್ಲಿ ರಾಜ್ಯದ 12 ಲಕ್ಷ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಜನ್ ಧನ್ ಯೋಜನೆ ಅನ್ವಯ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಈ ಸದಸ್ಯರಿಗೆ ರೂಪೇ ಕಾರ್ಡ್ ಗಳನ್ನು ಪ್ರಧಾನಿ ವಿತರಿಸಲಿದ್ದಾರೆ.

ಪ್ರದಾನಿಯಿಂದ ಶ್ರೀ ಕ್ಷೇತ್ರದಲ್ಲಿ ಸರ್ವಪೂಜೆ:

ಸರ್ವಪೂಜೆ ಮಾಡಲಿರುವ ನರೇಂದ್ರ ಮೋದಿ ಧರ್ಮಸ್ಥಳ ಮಂಜುನಾಥೇಶ್ವರ ನ ದರ್ಶನ ಪಡೆದ ಬಳಿಕ ಪ್ರಧಾನಿ ಮೋದಿ ಅವರು ಸರ್ವಪೂಜೆಯನ್ನು ಮಾಡಲಿದ್ದು, ಮಂಜುನಾಥೇಶ್ವರ, ಅಮ್ಮನವರು,ಅಣ್ಣಪ್ಪ ಸ್ವಾಮಿ,ಗಣಪತಿ ಮತ್ತು ಚಂದ್ರನಾಥಸ್ವಾಮಿಗೆ ಪೂಜೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯನ್ನು ಬರಮಾಡಿಕೊಳ್ಳಲು ಹೆಗ್ಗಡೆ ಕುಟುಂಬ ಸಜ್ಜಾಗಿದೆ

ರಸ್ತೆ ಉದ್ದಕ್ಕೂ ಅಲಂಕಾರ:

ಮೋದಿ ಆಗಮನ ಹಿನ್ನೆಲೆಯಲ್ಲಿ ರಸ್ತೆ ಉದ್ದಕ್ಕೂ ಅಲಂಕಾರ ಧರ್ಮಸ್ಥಳದಿಂದ ಉಜಿರೆಗೆ ರಸ್ತೆ ಮೂಲಕ ಹೋಗುತ್ತಿರುವುದರಿಂದ ರಸ್ತೆ ಉದ್ದಕ್ಕೂ ವಿವಿಧ ರೀತಿಯ ಕಟೌಟ್ ಗಳನ್ನು ಹಾಕಲಾಗಿದೆ. ಹಾಗೂ ಬಣ್ಣ-ಬಣ್ಣಗಳಿಂದ ತಯಾರಿಸಿದ ಬಟ್ಟೆಗಳನ್ನು ರಸ್ತೆ ಉದ್ದಕ್ಕೂ ನೇತು ಹಾಕಲಾಗಿದೆ. ಅಷ್ಟೇ ಅಲ್ಲದೇ ಹಳದಿ, ಕೆಂಪು, ಕೇಸರಿ ಬಣ್ಣಗಳ ಛತ್ರಿಗಳನ್ನು ನೇತು ಹಾಕಲಾಗಿದ್ದು, ಇದು ನೋಡುಗರ ಕಣ್ಮನ ಸೆಳೆದಿದೆ

ಶನಿವಾರ ರಾತ್ರಿಯಿಂದ ನಾಳೆ ಮಧ್ಯಾಹ್ನ 1.30ರವರೆಗೆ ಸಾರ್ವಜನಿಕ ದರ್ಶನ ನಿಷೇಧ :

ಪ್ರಧಾನಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಂಜುನಾಥ ಸ್ಚಾಮಿ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ .ಅಕ್ಟೋಬರ್ 28ರ ಅಂದರೆ ಶನಿವಾರ ರಾತ್ರಿ 9 ಗಂಟೆಯಿಂದ 29ರ ಮದ್ಯಾಹ್ನ 2 ಗಂಟೆಯವರಿಗೆ ದೇವಾಲಯದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಧರ್ಮಸ್ಥಳ ಮುಖ್ಯದ್ವಾರ ಮತ್ತು ಪ್ರವೇಶ ದ್ವಾರಗಳಲ್ಲಿ ಭಾನುವಾರ ಮಧ್ಯಾಹ್ನ 1.30ರವರೆಗೆ ಪ್ರವೇಶವಿರುವುದಿಲ್ಲ. ಧರ್ಮಸ್ಥಳ- ಉಜಿರೆ ಮಧ್ಯೆ ಭಾನುವಾರ ಬೆಳಗ್ಗೆ 9 ಗಂಟೆಯ ಅನಂತರ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.

ಭದ್ರತೆಗೆ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರು :ಐಜಿಪಿ ಹೇಮಂತ ನಿಂಬಾಳ್ಕರ್ ನೇತ್ರತ್ವ:

ಭದ್ರತೆಯ ನೇತೃತ್ವ ವಹಿಸಿದ ಐಜಿಪಿ ಹೇಮಂತ ನಿಂಬಾಳ್ಕರ್ ತಂಡ 150 ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು‌ 2 ಸಾವಿರಕ್ಕೂ ಹೆಚ್ಚು ಮಿಕ್ಕಿ ಪೊಲೀಸರನ್ನು ಮೋದಿ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ. ಎಸ್ ಪಿ ಜಿ ಭಧ್ರತಾ ಪಡೆಯ ಜತೆ ಐಜಿಪಿ ಹೇಮಂತ ನಿಂಬಾಳ್ಕರ್ ಅವರ ತಂಡ ಭದ್ರತೆಯ ನೇತೃತ್ವವನ್ನು ವಹಿಸಿದೆ. ಧರ್ಮಸ್ಥಳದಿಂದ ಉಜಿರೆಗೆ ಮೋದಿ ಕಾರಿನಲ್ಲಿ ಸಂಚರಿಸಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಎಲ್ಲಾ ಅಂಗಡಿಗಳನ್ನು ಮುಚ್ಚಲು‌ ಪೊಲೀಸ್ ಇಲಾಖೆ ಆದೇಶಿಸಿದೆ.

Comments are closed.