ರಾಷ್ಟ್ರೀಯ

ಕೇವಲ 2 ರೂಪಾಯಿಯಲ್ಲೇ ಚಿಕಿತ್ಸೆ ನೀಡುತ್ತಾರೆ ಈ ವೈದ್ಯರು!

Pinterest LinkedIn Tumblr


ಚೆನ್ನೈ: ಹಣಕ್ಕಾಗಿ ರೋಗಿಗಳ ಜೀವದ ಜತೆ ಚೆಲ್ಲಾಟ ಆಡುವ ವೈದ್ಯರೇ ಹೆಚ್ಚು. ಆದರೆ, ಕೇವಲ ಎರಡು ರೂಪಾಯಿಗಳಲ್ಲಿ ರೋಗ ಗುಣಪಡಿಸುವ ವೈದ್ಯರು ಇದ್ದಾರೆ ಎಂದರೆ ನಂಬಲೇಬೇಕು. ಹೌದು, ಉತ್ತರ ಚೆನ್ನೈ ಭಾಗದಲ್ಲಿ ತಿರುವೆಂಗಡಮ್ ವೀರರಾಘವನ್ (67) ಎಂಬ ವೈದ್ಯರು ಹಲವು ದಶಕಗಳಿಂದ ರೋಗಿಗಳಿಗೆ ಕೇವಲ ಎರಡು ರೂಪಾಯಿಗಳಲ್ಲಿ ಚಿಕಿತ್ಸೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ನಿಜ ಜೀವನದ ಹೀರೋ ತಿರುವೆಂಗಡಮ್ ವೀರರಾಘವನ್ ಅವರು ಸ್ಟಾನ್ಲಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದರು. ತನ್ನ ಕ್ಷೇತ್ರದ ಜನರಿಗೆ ಅನುಕೂಲವಾಗಲೆಂದು 1973 ರಿಂದ ಕೇವಲ 2 ರೂಪಾಯಿ ದರದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದು, ನಂತರ ಈ ದರವನ್ನು 5 ರೂಪಾಯಿಗೆ ಹೆಚ್ಚಳ ಮಾಡಿದ್ದರು. ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿರುವುದನ್ನು ವಿರೋಧಿಸಿ ಕೆಲವು ವೈದ್ಯರು ಇವರ ವಿರುದ್ಧ ಪ್ರತಿಭಟನೆ ಮಾಡಿದ್ದು, ಕನಿಷ್ಟ ವೈದ್ಯಕೀಯ ಶುಲ್ಕವನ್ನು 100 ರೂಪಾಯಿ ನಿಗದಿ ಪಡಿಸಲೇಬೇಕು ಎಂದು ಆಗ್ರಹಿಸಿದ್ದರು.

ಇದ್ಯಾವುದಕ್ಕೂ ಜಗ್ಗದ ವೀರರಾಘವನ್ ತನ್ನದೇ ಆದ ನಿಯಮವೊಂದನ್ನು ರಚಿಸಿಕೊಂಡು ರೋಗಿಗಳಿಂದ ಶುಲ್ಕ ಪಡೆಯುವುದನ್ನೇ ನಿಲ್ಲಿಸಿದ್ದು, ಅದರ ಬದಲಿಗೆ ಬೇರಾವುದೋ ಚಿಕ್ಕ ಪುಟ್ಟ (ಆಹಾರ ಸೇರಿದಂತೆ ದೈನಂದಿನ ಬಳಕೆ ವಸ್ತು) ವಸ್ತುಗಳನ್ನು ಪಡೆಯಲು ನಿರ್ಧರಿಸಿದರು. ಇವರು ಇಂಡಸ್ಟ್ರೀಯಲ್ ಹೆಲ್ತ್‌ನ ಸಹವರ್ತಿಯಾಗಿದ್ದರಿಂದ ಇವರನ್ನು ಕಾರ್ಪೊರೇಟ್ ಆಸ್ಪತ್ರೆಯೂ ಸ್ಕ್ರೀನಿಂಗ್ ಕೆಲಸದಲ್ಲಿ ತೊಡಗಿಸಿತ್ತು. ಇದರಿಂದ ಸ್ಥಿರ ಆದಾಯವೂ ಬರುವಂತಾಯಿತು.

‘ನಾನು ಯಾವುದೇ ಖರ್ಚಿಲ್ಲದೆಯೇ ವೈದ್ಯಕೀಯ ಶಿಕ್ಷಣ ಪಡೆದುಕೊಂದ್ದು, ಮಾಜಿ ಮುಖ್ಯಮಂತ್ರಿ ಕೆ.ಕಾಮರಾಜ್ ಅವರ ನೀತಿಗೆ ಧನ್ಯವಾದ ಹೇಳಲೇಬೇಕು. ಹೀಗಾಗಿ ನಾನು ಯಾವುದೇ ರೋಗಿಗಳ ಬಳಿ ಶುಲ್ಕ ಪಡೆಯಬಾರದೆಂದು ನಿರ್ಧರಿಸಿದೆ’ ಎಂದು ತಿರುವೆಂಗಡಮ್ ಹೇಳುತ್ತಾರೆ.

ವ್ಯಾಸರಾಪಾಡಿ ಪ್ರದೇಶದ ಕೊಳಗೇರಿ ನಿವಾಸಿಗಳಿಗೆಂದು ಆಸ್ಪತ್ರೆ ನಿರ್ಮಿಸುವ ಮೂಲಕ ಜನ ಸೇವೆ ಮಾಡುವ ಕನಸನ್ನು ವೈದ್ಯ ತಿರುವೆಂಗಡಮ್ ವೀರರಾಘವನ್ ಹೊಂದಿದ್ದಾರೆ.

Comments are closed.