ಕರಾವಳಿ

ಪೊಲೀಸ್ ಸಿಬ್ಬಂದಿಗೆ ಬೈಕ್ ಡಿಕ್ಕಿ : ಪರಾರಿಯಾಗಿದ್ದ ರೌಡಿಶೀಟರ್‌ ಸೆರೆ

Pinterest LinkedIn Tumblr

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ ಜಂಕ್ಷನ್ ಬಳಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬೈಕ್ ಡಿಕ್ಕಿ ಹೊಡೆದು ಪರಾರಿಯಾಗಿದ್ದ ರೌಡಿಶೀಟರ್‌ನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ರೌಡಿಶೀಟರ್‌ ಲಿಸ್ಟ್ ನಲ್ಲಿರುವ ಬಜಪೆಯ ಶಾಂತಿಗುಡ್ಡೆಯ ನಿವಾಸಿ ಅಬ್ದುಲ್ ಮುನೀರ್ (22) ಎಂದು ಹೆಸರಿಸಲಾಗಿದೆ..ಮರಕಡ ಜಂಕ್ಷನ್ ಬಳಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಳಿಸಿದ್ದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.

ಆಕ್ಟೋಬರ್ 22ರಂದು ಸಿಎಂ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಯ ಭೇಟಿಯ ಹಿನ್ನೆಲೆ ಮಂಗಳೂರು ನಗರ ಸಂಚಾರ ಉತ್ತರ ಉಪವಿಭಾಗದ ಪೊಲೀಸ್ ನಿರೀಕ್ಷಕ ಮಂಜುನಾಥ್‌ ಅವರು ಸಿಬ್ಬಂದಿ ಜೊತೆ ಮಂಗಳೂರು ನಗರ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ ಜಂಕ್ಷನ್ ಬಳಿ ಕರ್ತವ್ಯದಲ್ಲಿದ್ದರು.

ಈ ಸಂದರ್ಭದಲ್ಲಿ ಬಜಪೆ ಕಡೆಯಿಂದ ಕಾವೂರು ಕಡೆಗೆ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೇ ಬರುತ್ತಿದ್ದ ಹಿನ್ನೆಲೆ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ಚೆಲುವರಾಜ್ ಬೈಕ್ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಈ ವೇಳೆ ಬೈಕ್ ಸವಾರ ಬೈಕ್‌ನ್ನು ಏಕಾಎಕಿ ಪೊಲೀಸ್ ಸಿಬ್ಬಂದಿವರಾದ ಚೆಲುವರಾಜ್ ಎಂಬುವರಿಗೆ ಡಿಕ್ಕಿ ಹೊಡೆದು ಗಾಯಗೊಳಿಸಿ ಬೈಕ್‌ನೊಂದಿಗೆ ಪರಾರಿಯಾಗಿದ್ದ.

ಈ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಇದೀಗ ಆರೋಪಿ ಅಬ್ದುಲ್ ಮುನೀರ್‌‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಈಗಾಗಲೇ ರೌಡಿಶೀಟರ್‌ ಆಗಿದ್ದು 10 ಪ್ರಕರಣಗಳು ಈತನ ಮೇಲಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Comments are closed.