ಚೆನ್ನೈ: ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ನುಡಿಸಬೇಕು, ಅದಕ್ಕೆ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕು ಎಂದು ಕಳೆದ ವರ್ಷ ಸರ್ಕಾರ ಹೊರಡಿಸಿದ್ದ ಆದೇಶದ ವಿರುದ್ಧ ನಟ ಕಮಲ್ ಹಾಸನ್ ಅವರು ಆಕ್ರೋಶ ಹೊರಹಾಕಿದ್ದಾರೆ.
ರಾಷ್ಟ್ರಗೀತೆ ವಿವಾದ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕಂಡಕಂಡ ಸ್ಥಳಗಳೆಲ್ಲಾ ನನ್ನ ದೇಶಭಕ್ತಿಯನ್ನು ಪರೀಕ್ಷಿಸಬೇಡಿ ಅಥವಾ ರಾಷ್ಟ್ರಗೀತೆ ಹೇರಬೇಡಿ ಎಂದು ಅಸಮಾಧಾನ ಸೂಚಿಸಿದ್ದಾರೆ.
ಸಿಂಗಾಪುರದಲ್ಲಿ ದಯಾಪರ ಸರ್ವಾಧಿಕಾರವಿದೆ. ಅಲ್ಲಿ ಮಧ್ಯರಾತ್ರಿ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಕಂಡಕಂಡ ಕಡೆಯಲ್ಲೆಲ್ಲಾ ನನ್ನ ರಾಷ್ಟ್ರಭಕ್ತಿ ಪರೀಕ್ಷಿಸುವ ಬದಲು ಭಾರತ ಕೂಡ ಹಾಗೆಯೇ ಮಾಡಿದರೆ ಒಳ್ಳೆಯದು. ಸರ್ಕಾರ ಬೇಕಿದ್ದರೆ ದೂರದರ್ಶನ ಚಾನೆಲ್ ಗಳಲ್ಲಿ ರಾಷ್ಟ್ರಗೀತೆ ಹಾಕಿಕೊಳ್ಳಲಿ. ಆದರೆ, ನಾಗರಿಕರ ಮೇಲೆ ಹೇರುವುದು ಬೇಡ ಎಂದು ಹೇಳಿದ್ದಾರೆ.
ಚಿತ್ರ ಮಂದಿರಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ನುಡಿಸಬೇಕೆಂಬ ತನ್ನ ಹಿಂದಿನ ಆದೇಶ ಮರುಪರಿಶೀಲಿಸುವುದಾಗಿ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಹೇಳಿತ್ತು.