ಮುಂಬಯಿ : ಗೋರೆಗಾಂವ್ ಕರ್ನಾಟಕ ಸಂಘವು ಮಹಾನಗರದಲ್ಲಿ ಕಳೆದ ಅರುವತ್ತು ವರ್ಷಗಳಿಂದ ಕನ್ನಡದ ಹಾಗೂ ಕನ್ನಡಿಗರ ಸೇವಾ ನಿರತರಾಗಿದ್ದು ಅನೇಕ ತುಳು ಕನ್ನಡಿಗರು ಈ ಸಂಘದ ಅಧ್ಯಕ್ಷರಾಗಿ ಹಾಗೂ ವಿವಿಧ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿರುವರು. ಸಂಘದ ಮೂಲಕ ಇವರೆಲ್ಲರು ಮಾಡಿದ ಸೇವೆ ಪ್ರಸಂಶನೀಯ ಎಂದು ಗೋರೆಗಾಂಗ್ ಕರ್ನಾಟಕ ಸಂಘದ ಅಧ್ಯಕ್ಷರಾದ ರಮೇಶ ಶೆಟ್ಟಿ ಪಯ್ಯಾರ್ ನುಡಿದರು.
ಸಂಘದ 60 ನೇ ಸಂಸ್ಥಾಪನಾ ದಿನಾಚರಣೆ ಮತ್ತು ದತ್ತಿನಿಧಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಗೋರೆಗಾಂವ್ ಪೂರ್ವ ಕೇಶವ ಗೋರೆ ಸಭಾಗೃಹದಲ್ಲಿ ಜರಗಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ಮಹಾನಗರದಲ್ಲಿ ಕನ್ನಡ ಬಾಷೆ, ತುಳು ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಗೋರೆಗಾಂವ್ ಕರ್ನಾಟಕ ಸಂಘವು ಕಳೆದ ಆರು ದಶಕಗಳಿಂದ ಮಹತ್ತರ ಪಾತ್ರವನ್ನು ವಹಿಸಿದೆ. ಇದಕ್ಕೆಲ್ಲಾ ಕಾರಣ ಇದರ ಹಿಂದಿನ ಅಧ್ಯಕ್ಷರು ಹಾಗೂ ಸಂಘದ ಇತರ ಸಂಘಟಕರು. ಸಂಘದ ಮಹಿಳಾ ವಿಭಾಗ ಹಾಗೂ ಯುವ ವಿಭಾಗವು ಸಂಘದಲ್ಲಿ ಸಕ್ರಿಯ ಪಾತ್ರವನ್ನು ನಿರ್ವಹಿಸುತ್ತಿದೆ. ಸಂಘದಲ್ಲಿ ಸಾವಿರಾರು ಮಂದಿ ಸದಸ್ಯರಿದ್ದು ಸಂಘದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳು ಕನ್ನಡಿಗರು ಬಾಗವಹಿಸುವಂತಾಗಲಿ ಎಂದು ರಮೇಶ ಶೆಟ್ಟಿ ಪಯ್ಯಾರ್ ಅವರು ಹೇಳಿದರು.
ಸಂಘವು ಪ್ರತೀ ವರ್ಷ ನೀಡುತ್ತಿರುವ ಎ. ಎಸ್. ನಾವಡ ದತ್ತಿನಿಧಿ ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ವಿಶ್ವನಾಥ ಸಾಲ್ಯಾನ್ ಅವರಿಗೆ ಪ್ರಧಾನಿಸಲಾಗಿದ್ದು ವಿಶ್ವನಾಥ ಸಾಲ್ಯಾನ್ ದಂಪತಿಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದ ಅಧ್ಯಕ್ಷರು, ಪಾರುಪತ್ಯಗಾರರು ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ರವಿ ರಾ. ಅಂಚನ್ ಅವರು ಅಭಿನಂದನಾ ಬಾಷಣ ಮಾಡಿದರು. ಗುಣೋದಯ ಎಸ್. ಐಲ್ ಸನ್ಮಾನಿತರನ್ನು ಪರಿಚಯಿಸಿದ್ದು ವಸಂತಿ ಕೋಟೆಕಾರ್ ಪ್ರಶಸ್ತಿ ಪತ್ರ ವಾಚನಗೈದರು. ಪ್ರಶಸ್ತಿಯನ್ನು ಸ್ವೀಕರಿಸಿದ ವಿಶ್ವನಾಥ್ ಸಾಲ್ಯಾನ್ ಅವರು ಈ ಸಂದರ್ಭದಲ್ಲಿ ಕೃತಜ್ನತೆಯನ್ನು ವ್ಯಕ್ತಪಡಿಸಿದರು.
ಸಂಘದ ಮಾಜಿ ಅಧ್ಯಕ್ಷರೂ, ಪಾರುಪತ್ಯಗಾರರು ಆದ ರವಿ ರಾ. ಅಂಚನ್ ಮಾತನಾಡುತ್ತಾ ಸಂಘದ ಮಹಿಳಾ ವಿಭಾಗವು ಕಳೆದ ಹಲವಾರು ವರ್ಷಗಳಿಂದ ಕ್ರೀಯಾಶೀಲವಾಗಿದ್ದು ಸಂಘದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿದೆ ಎನ್ನುತ್ತಾ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯದ್ಯಕ್ಷರುಗಳು ಮತ್ತು ಅವರ ತಂಡದ ಸೇವೆಯನ್ನು ಮೆಚ್ಚಿ ಮಾತನಾಡಿದರು. ಮಾಜಿ ಅಧ್ಯಕ್ಷರಾದ ಶಕುಂತಳಾ ಪ್ರಭು ಅವರು ಮಾತನಾಡಿ ಸಂಘದ ಹಿರಿಯರ ಸೇವೆಗೆ ಅಭಿನಂದನೆ ಸಲ್ಲಿಸಿದರು.
ಮಾಜಿ ಅಧ್ಯಕ್ಷರಾದ ವಿ. ಪಿ. ಕೋಟ್ಯಾನ್ ಅವರು ಮಾತನಾಡುತ್ತಾ ಸಂಘದ ಮಾಜಿ ಅಧ್ಯಕ್ಷರುಗಳ ಹಾಗೂ ಸಂಘಕ್ಕೆ ಅವರ ಸೇವೆಯ ಬಗ್ಗೆ ಮಾಹಿತಿಯಿತ್ತರು. ಕಳೆದ ಅರುವತ್ತು ವರ್ಷಗಳಲ್ಲಿನ ಸಂಘದ ಮಾಜಿ ಅಧ್ಯಕ್ಷರುಗಳ ಸೇವೆ ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ ಎಂದರು.
ಗೌರವ ಪ್ರಧಾನ ಕಾರ್ಯದರ್ಶಿ ಮೀನಾ ಕಾಳಾವರ್ ಮತ್ತು ಜೊತೆ ಕಾರ್ಯದರ್ಶಿ ಗುಣೋದಯ ಎಸ್. ಐಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ನಾರಾಯಣ ಮೆಂಡನ್ ಉಪಸ್ಥಿತರಿದ್ದರು. ಸವಿತಾ ಎಸ್. ನಾಯಕ್ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ವಿಶಾಲಾಕ್ಷಿ ಉಳುವಾರ ವಂದನಾರ್ಪಣೆ ಗೈದರು. ಮನೋರಂಜನೆಯ ಅಂಗವಾಗಿ ಬ್ರಾಮರಿ ಯಕ್ಷಗಾದ ತಂಡದ ಮಹಿಳಾ ಕಲಾವಿದರಿಂದ, ಕಟೀಲು ಸದಾನಂದ ಶೆಟ್ಟಿಯವರ ನಿರ್ದೇಶನದಲ್ಲಿ ವಿಶ್ವಾಮಿತ್ರ ಮೇನಕೆ ನೃತ್ಯ ರೂಪಕ ಪ್ರದರ್ಶನವಿತ್ತು.
ವರದಿ : ಈಶ್ವರ ಎಂ. ಐಲ್ / ಚಿತ್ರ : ಸ್ನೇಹಿತ್ ಸುನಿಲ್ ರಾವ್
Comments are closed.