ಕರಾವಳಿ

ಶೌರ್ಯಭರಿತ ಧೀಮಂತ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಆದರ್ಶ ಪಾಲಿಸಲು ಕರೆ

Pinterest LinkedIn Tumblr

ಮಂಗಳೂರು ಅಕ್ಟೋಬರ್ 23: ದ.ಕ.ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಬಂಟ್ಸ್ ಹಾಸ್ಟೇಲ್‍ನ ರಾಮಕೃಷ್ಣ ವಿದ್ಯಾ ಸಂಸ್ಥೆಗಳ ಶ್ರೀಮತಿ ಗೀತಾ ಎಸ್ ಎಮ್ ಶೆಟ್ಟಿ ಸಭಾಭವನದಲ್ಲಿ ಆಚರಿಸಲಾಯಿತು.

ವಿಧಾನ ಪರಿಷತ್‍ನ ಮುಖ್ಯ ಸಚೇತಕ ಐವನ್ ಡಿ ಸೋಜರವರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶೌರ್ಯಭರಿತ ಧೀಮಂತ ಮಹಿಳೆಯ ಜಯಂತಿಯನ್ನು ಪ್ರಥಮ ಬಾರಿಗೆ ಸರಕಾರವು ಆಚರಿಸುತ್ತಿದ್ದು, ಇದು ಅರ್ಥಪೂರ್ಣವಾದ ಸಂತೋಷದಾಯಕ ವಿಷಯವಾಗಿದೆ.

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯ ವಿರುದ್ಧ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆಯ ಹೋರಾಟದ ವಿಧಾನ, ಚಿಂತನೆ, ಜನಪರ ಕಾಳಜಿ, ನಾಡಿನ ಮೇಲಿದ್ದ ಪ್ರೀತಿ ಮೆಚ್ಚುವಂಥದ್ದು. ಅಲ್ಲದೇ ಬ್ರಿಟಿಷರ ಜನ ವಿರೋಧಿ ನಿಲುಹುಗಳ ವಿರುದ್ದ ಹೋರಾಡಿ ತನ್ನ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟ ಆ ಹೆಣ್ಣಿನ ತ್ಯಾಗವು ಶ್ಲಾಘನೀಯವಾಗಿದೆ. ಹಾಗೂ ನಾವು ಮಾಡಿದಂತಹ ಒಳ್ಳೆಯ ಕೆಲಸಗಳು ಚರಿತ್ರೆಗೆ ಸೇರಲ್ಪಡುತ್ತದೆ. ಆದುದರಿಂದ ಎಲ್ಲಾ ಮಹಿಳೆಯರು, ವಿದ್ಯಾರ್ಥಿಗಳು ರಾಣಿ ಚೆನ್ನಮ್ಮಳ ಚರಿತ್ರೆಯನ್ನು ಓದಿ ತಿಳಿದು ಆಕೆಯ ಆದರ್ಶಗಳನ್ನು, ಚಿಂತನೆಗಳನ್ನು ಪಾಲಿಸಬೇಕು ಎಂದು ಕರೆಕೊಟ್ಟರು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನೀಲ್ ಮಾತನಾಡಿ ರಾಜ್ಯ ಸರ್ಕಾರ ಆಚರಿಸುವ ಜಯಂತಿಗಳಲ್ಲಿ ಚೆನ್ನಮ್ಮಳ ಜಯಂತಿಯು ಕೂಡ ಪ್ರಮುಖವಾಗಿದೆ.. ಇಂತಹ ಆಚರಣೆಗಳಿಂದ ಮಹಿಳೆಯರಲ್ಲಿ ಸ್ಫೂರ್ತಿ ತುಂಬುತ್ತದೆ ಹಾಗೂ ಚೆನ್ನಮ್ಮಳ ಚರಿತ್ರೆ ಕುರಿತು ಹೆತ್ತವರು ಮಕ್ಕಳಿಗೆ ತಿಳಿಸಬೇಕು ಎಂದರು. ಅಲ್ಲದೇ ತಾನು ಕೂಡ ವಿದ್ಯಾರ್ಥಿ ಜೀವನದಲ್ಲಿ ಚೆನ್ನಮ್ಮಳ ಛದ್ಮವೇಷವನ್ನು ಹಾಕಿ ಪ್ರಶಸ್ತಿಯನ್ನು ಪಡೆದಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮುಹಮ್ಮದ್ ಮೋನು, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಬಿ ಎಚ್ ಖಾದರ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಹಾಸ ರೈ ಬಿ. ಮತ್ತಿತರರು ಉಪಸ್ಥಿತರಿದ್ದರು.

Comments are closed.