ಕರಾವಳಿ

ಪದವಿನಂಗಡಿ ಸಮೀಪ ಕೊರಗಜ್ಜನ ಕಟ್ಟೆಯೊಳಗೆ ನುಗ್ಗಿದ ಕಾರು : ಭಕ್ತರು ಪಾರು

Pinterest LinkedIn Tumblr

ಮಂಗಳೂರು, ಅಕ್ಟೋಬರ್, 23 : ಬೋಂದೆಲ್ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರೊಂದು ರಸ್ತೆ ಮಧ್ಯೆ ಯೂ ಟರ್ನ್ ತೆಗೆದುಕೊಳ್ಳುತ್ತಿದ್ದ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಸಮೀಪದಲ್ಲೇ ಇದ್ದ ತುಳು ನಾಡಿನ ಆರಾಧ್ಯ ದೈವ ಹಾಗೂ ಕಾರ್ನಿಕ ದೈವವಾದ ಕೊರಗಜ್ಜನ ಕಟ್ಟೆಗೆ ಡಿಕ್ಕಿ ಹೊಡೆದ ಘಟನೆ ಪದವಿನಂಗಡಿ ಸಮೀಪ ಇಂದು ಸಂಭವಿಸಿದೆ.

ಕಾವೂರು – ಬೋಂದೇಲ್ ಕಡೆಯಿಂದ ಯೆಯ್ಯಾಡಿ ಕಡೆಗೆ ಬರುತ್ತಿದ್ದ ಕಾರು ಪದವಿನಂಗಡಿ ಸಮೀಪ ಬರುತ್ತಿದ್ದಂತೆ ಎದುರಿನಿಂದ ರಸ್ತೆ ಮಧ್ಯೆ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ಕಾರಿಗೆ ಅಪಘಾತವಾಗುವುದನ್ನು ತಪ್ಪಿಸಲು ಯತ್ನಿಸಿದ ಸಂದರ್ಭ ಪದವಿನಂಗಡಿ ಬಳಿ ರಸ್ತೆ ಪಕ್ಕದಲ್ಲಿರುವ ಕೊರಗಜ್ಜನಕಟ್ಟೆಯ ಆವರಣದೊಳಗಡೆ ಏಕಾಏಕಿ ನುಗ್ಗಿದೆ. ಈ ವೇಳೆ ಢಿಕ್ಕಿಯ ರಭಸಕ್ಕೆ ಕಟ್ಟೆಯ ಆವರಣಗೊಡೆಗೆ ಹಾನಿಯಾಗಿದ್ದು, ದೇವರ ಗುಡಿಯ ಸಮೀಪದ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ದೂರ ಹೋಗಿಬಿದ್ದಿದೆ. ಆದರೆ ಗುಡಿಯ ಒಳಗಿದ್ದ ಭಕ್ತರಿಗೆ ಯಾವೂದೇ ಹಾನಿ ಸಂಭವಿಸಲಿಲ್ಲ.

ಪದವಿನಂಗಡಿಯಲ್ಲಿರುವ ಕೊರಗಜ್ಜನ ಕಟ್ಟೆ ತುಂಬಾ ಕಾರಣಿಕವಾದ ಸ್ಥಳವಾಗಿದೆ. ಸಾವಿರಾರು ಮಂದಿ ಭಕ್ತರು ಹರಕೆ ಹೊತ್ತುಕೊಂಡು ಇಲ್ಲಿಗೆ ಬರುತ್ತಾರೆ. ಆದ್ದರಿಂದಲೇ ಈ ಅಪಘಾತದಲ್ಲಿ ಯಾರೊಬ್ಬರಿಗೂ ಗಾಯವಾಗಿಲ್ಲವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 

Comments are closed.