
ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಅಕ್ಟೋಬರ್,18 : ಮಂಗಳೂರಿನ ಪ್ರತಿಷ್ಠಿತ ಕರಾವಳಿ ಕಾಲೇಜು ಸಮೂಹದ ವತಿಯಿಂದ ನಗರದ ಕೊಟ್ಟಾರದ ಕಾಲೇಜು ಆವರಣದಲ್ಲಿ ಶುಕ್ರವಾರ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸರ್ವಧರ್ಮ ಸಮಭಾವ ಸಮನ್ವಯದ ಚಿಂತನೆಯೊಂದಿಗೆ ಜಿ.ಆರ್ ಎಜ್ಯುಕೇಶನ್ ಹಾಗೂ ಕರಾವಳಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಅವರ ನೇತ್ರತ್ವದಲ್ಲಿ ಈ ದೀಪಾವಳಿ ಹಬ್ಬವನ್ನು ಅಚರಣೆ ಮಾಡಲಾಯಿತು.

ಕಾಲೇಜು ಆಡಳಿತಾ ಮಂಡಳಿಯ ನಿರ್ದೇಶಕಿ ಶ್ರೀಮತಿ ಲತಾ.ಜಿ.ರಾವ್. ಪ್ರಾಂಶುಪಾಲ ಮೋಹನ್ ಹಾಗೂ ವಿವಿಧ ವಿಭಾಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ದೂರದೂರಿನ ವಿದ್ಯಾರ್ಥಿಗಳಿಗೆ ದೀಪಾವಳಿ ಆಚರಿಸಲು ತಮ್ಮ ಊರಿಗೆ ತೆರಳಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಕಾಲೇಜಿನ ಸರ್ವಧರ್ಮ ಸಮಭಾವ ಸಮನ್ವಯದ ಚಿಂತನೆಯೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾಲೇಜಿನಲ್ಲಿ ಎಲ್ಲಾ ಜಾತಿ ಧರ್ಮದ ವಿದ್ಯಾರ್ಥಿಗಳು ದೀಪಾವಳಿ ಹಬ್ಬವನ್ನು ಒಟ್ಟಿಗೆ ಆಚರಿಸುತ್ತಿರುವುದು ಹೆಮ್ಮೆಯೆ ವಿಷಯ.ಬೇರೆ ಬೇರೆ ಊರುಗಳಿಂದ ಬಂದಂತಹ ವಿವಿಧ ಜಾತಿ, ಧರ್ಮಗಳ ವಿದ್ಯಾರ್ಥಿಗಳಿಗೆ ಇಂಥಹ ಒಂದು ಹಬ್ಬವನ್ನು ಆಚರಿಸಲು ಕಾಲೇಜು ಆವಕಾಶ ಮಾಡಿಕೊಟ್ಟಿದ್ದು, ವಿದ್ಯಾರ್ಥಿಗಳೆಲ್ಲರೂ ಸಂಭ್ರಮದಿಂದ ಪಾಲ್ಗೊಂಡು ಸಾಮರಸ್ಯದಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ಇಲ್ಲಿ ದೀಪಾವಳಿ ಮಾತ್ರವಲ್ಲದೇ ಓಣಂ ಸಹಿತಾ ವಿವಿಧ ಧರ್ಮಗಳ ಹಬ್ಬವನ್ನು ಎಲ್ಲಾ ವಿದ್ಯಾರ್ಥಿಗಳು ಒಟ್ಟಿಗೆ ಆಚರಿಸುತ್ತಾರೆ.

ದೀಪಾವಳಿ ಎಂದರೆ ದೀಪದ ಹಬ್ಬವಾಗಿದ್ದು, ದೀಪ ಎಂದರೆ ಸಂತೋಷದ ಸಂಕೇತವಾಗಿದೆ. ದೀಪಾವಳಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಹಬ್ಬವಲ್ಲ, ಇಡೀ ದೇಶವೇ ದೀಪಾವಳಿಯನ್ನು ಆಚರಿಸುತ್ತಿದೆ. ದೀಪಾವಳಿ ಹಬ್ಬವನ್ನು ಕೇವಲ ಮೂರು ದಿನ ಆಚರಿಸದೆ, ಪ್ರತಿ ದಿನವೂ ಆಚರಿಸಬೇಕು. ವಿದ್ಯಾರ್ಥಿಗಳಲ್ಲಿ ಯಾವೂದೇ ಜಾತಿ ಧರ್ಮದ ಬಗ್ಗೆ ದ್ವೇಷ ಬಾವನೆ ಬರಬಾರದೆಂಬ ಸದುದ್ದೇಶದಿಂದ ಇಂತಹ ಹಬ್ಬವನ್ನು ಒಟ್ಟಿಗೆ ಆಚರಿಸಲು ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಅಷ್ಟೇ, ಈ ರೀತಿಯ ಹಬ್ಬಗಳಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಂಡು ತಮ್ಮ ಭವಿಷ್ಯವನ್ನು ಉಜ್ವಲವಾಗಿ ಬೆಳಗಿಸುವಂತಹ ಸಾಧನೆ ಮಾಡಬೇಕು ಎಂದು ಈ ಸಂದರ್ಭದಲ್ಲಿ ಕರಾವಳಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತ್ತು. ಭಾರತದ ಸಾಂಸ್ಕೃತಿಕ ವೈಭವವನ್ನು ಸಾರುವ ಭರತನಾಟ್ಯ, ಜಾನಪದ ನೃತ್ಯ, ಭಾರತೀಯ ಶೈಲಿಯ ಫ್ಯಾಶನ್ ಶೋ, ಕೋಲಾಟ, ರಾಜಸ್ಥಾನಿ ನೃತ್ಯ, ಗುಜಾರಾತಿ ನೃತ್ಯ, ಕಾಶ್ಮೀರ ಶೈಲಿಯ ನೃತ್ಯ, ಬೆಂಗಳಿ ನೃತ್ಯಗಳನ್ನು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಬಳಿಕ ಕಾಲೇಜಿನ ಆವರಣದಲ್ಲಿ ಲಕ್ಷಾಂತರ ದೀಪಗಳನ್ನು ಬೆಳಗಿಸಿದ ವಿದ್ಯಾರ್ಥಿಗಳೆಲ್ಲರೂ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡರು. ಬಿಂದ್ಯಾ ನಾಯಕ್ ವಂದಿಸಿದರು.
Comments are closed.