ಕರಾವಳಿ

ಮಂಗಳೂರು : ಆಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ವಿಎಚ್‌ಪಿ, ಬಜರಂಗದಳ ಆಗ್ರಹ

Pinterest LinkedIn Tumblr

ಮಂಗಳೂರು: ದೇಶದಲ್ಲಿ ಯಾರೂ ನಕಲಿ ಗೋರಕ್ಷಕರಿಲ್ಲ. ಇರುವವರೆಲ್ಲ ಗೋವುಗಳನ್ನು ಪ್ರೀತಿಸುವವರು. ಈ ಹಿನ್ನೆಲೆಯಲ್ಲಿ ಗೋವುಗಳ ರಕ್ಷಣೆಗೆ ಮುಂದಾಗುವವರೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಗೋರಕ್ಷಕರು ಎಂಬ ಹೇಳಿಕೆಯನ್ನು ವಿರೋಧಿಸುವುದಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹೇಳಿದೆ.

ನಗರದಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಅವರು, ನಮ್ಮ ಅನಿಸಿಕೆ ಪ್ರಕಾರ ದೇಶದಲ್ಲಿ ಯಾರೂ ನಕಲಿ ಗೋರಕ್ಷಕರಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಗೋ ರಕ್ಷಕರು ಎಂಬ ಹೇಳಿಕೆಯನ್ನು ವಿರೋಧಿಸುವುದಾಗಿ ಹೇಳಿದರು.

ಅಕ್ರಮ ಕಸಾಯಿಖನೆಗಳನ್ನು ಮುಚ್ಚಲು ಆಗ್ರಹ :

ಮಂಗಳೂರು ಮಹಾನಗರ ಪಾಲಿಕೆ ನಡೆಸುತ್ತಿರುವ ಕಸಾಯಿಖಾನೆ ಕಾನೂನು ಬಾಹಿರ ಅಕ್ರಮ ಕಸಾಯಿಖಾನೆಯಾಗಿದೆ. ಇಲ್ಲಿ ಸುತ್ತಮುತ್ತಲು ಇರುವ ಅಕ್ರಮ ಕಸಾಯಿಖನೆಗಳನ್ನು ಮುಚ್ಚಲು ತಕ್ಷಣ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.

120 ಕಡೆ ಗೋಪೂಜೆಗೆ ವ್ಯವಸ್ಥೆ :

ದೀಪಾವಳಿ ಶುಭ ಸಂದರ್ಭದಲ್ಲಿ ಗೋಪೂಜೆ ಮಾಡುವುದು ಹಿಂದೂ ಧರ್ಮದ ಸಂಪ್ರದಾಯ. 33 ಕೋಟಿ ದೇವತೆಗಳ ಅವಾಸ ಸ್ಥಾನವಾಗಿರುವ ಗೋಮಾತೆಗೆ ವಿಶ್ವ ಹಿಂದ್ ಪರಿಷತ್, ಬಜರಂಗದಳ ಮಂಗಳೂರು ತಾಲೂಕಿನ 120 ಕಡೆ ಗೋಪೂಜೆಯನ್ನು ವ್ಯವಸ್ಥೆಗೊಳಿಸಿದೆ ಎಂದು ಶೇಣವ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದ್ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಬಜರಂಗದಳದ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ಬಜರಂಗದಳದ ಜಿಲ್ಲಾ ಗೋರಕ್ಷಾ ಪ್ರಮುಖ್ ಉಮೇಶ್ ಜಪ್ಪಿನಮೊಗರು ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.