ಕರಾವಳಿ

1 ಕೋಟಿ 80 ಲಕ್ಷ ವೆಚ್ಚದಲ್ಲಿ ಆಯುರ್ವೇದ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆ-ಸಚಿವ ಪ್ರಮೋದ್

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಸುಸಜ್ಜಿತವಾದ ಆಯುರ್ವೇದ ಆಯುಷ್ ಆಸ್ಪತ್ರೆಯನ್ನು ಒಂದು ಕೋಟಿ ಎಂಬತ್ತು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಮುಂದಿನ ವರ್ಷದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಹೊಸದಾಗಿ ನಿರ್ಮಿಸುವ ಆಸ್ಪತ್ರೆಯಲ್ಲಿ ಆಚರಿಸುವ ಆಶಯವನ್ನು ಹೊಂದಿದ್ದೇವೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರಿಂದು ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯುಷ್ ನಿರ್ದೇಶನಾಲಯ ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಆಯುಷ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಆಯುರ್ವೇದ ಪದ್ಧತಿ ಸೇವೆ ಪ್ರಾಚೀನವಾದುದು, ಪುರಾಣ ಗ್ರಂಥಗಳಲ್ಲಿಯೂ ಪ್ರಸ್ತಾಪ ಇದೆ, ಶೇಕಡಾ 10 ಆಯುರ್ವೇದದ ಜ್ಞಾನವನ್ನು ನಾವು ಹೊಂದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚಿನ ಬೆಂಬಲ ನೀಡಬೇಕಲ್ಲದೇ ಹೆಚ್ಚಿನ ಸಂಶೋಧನೆ ಕೂಡ ನಡೆಯುವಂತೆ ಪ್ರೋತ್ಸಾಹಿಸಬೇಕು ಎಂದರು.

ಆಯುರ್ವೇದ ಪದ್ಧತಿ ಭಾರತದ ಆಸ್ತಿ. ಈ ಪದ್ಧತಿಯನ್ನು ಮರುಪಡೆಯಲು ಪ್ರಯತ್ನಗಳು ನಡೆಯಬೇಕು. ಆಯುರ್ವೇದ ಔಷಧಿ ಸೇವನೆಯಿಂದ ಯಾವುದೇ ತೊಂದರೆಗಳಿಲ್ಲದೇ ನಿಧಾನವಾಗಿ ಗುಣಮುಖವಾದರೂ, ಶಾಶ್ವತವಾದ ನಿರ್ಮೂಲನೆ ಕಂಡುಕೊಳ್ಳಬಹುದು. ಇದರ ಸಂಪೂರ್ಣ ಪ್ರಯೋಜನ ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಭಾರತೀಯರಿಗಿಂತಲೂ ಯೋಗ, ವ್ಯಾಯಾಮ ಮುಂತಾದವುಗಳಲ್ಲಿ ಯೂರೋಪಿನವರೇ ಹೆಚ್ಚು ಒಲವು ಮೂಡಿಸಿಕೊಂಡಿರುವುದು ಕಂಡುಬರುತ್ತಿದೆ. ವಾತ, ಪಿತ, ಕಫಕ್ಕೆ ಒಳಪಟ್ಟ ಜನರಿದ್ದಾರೆ. ಅವರು ಆಯುರ್ವೇದದಂತಹ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಮ್ಮ ಜೀವನ ಕ್ರಮವೇ ಆಯುರ್ವೇದ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಹೇಳಿದರು.

ಆಯುರ್ವೇದ ಪದ್ಧತಿ ಜಗತ್ತಿಗೆ ಭಾರತ ನೀಡಿದ ದೊಡ್ಡ ಕೊಡುಗೆ. ನೋವು ನಿವಾರಣೆ ನಿಧಾನವಾದರೂ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ. ಜನರಿಗೆ ಆಯುರ್ವೇದದಲ್ಲಿ ನಂಬಿಕೆ ಹೆಚ್ಚಾಗಬೇಕು ಎಂದು ಜಿಲ್ಲಾ ಪಂಚಾಯತ್‌ನ ಉಪಾಧ್ಯಕ್ಷರಾದ ಶೀಲಾ.ಕೆ.ಶೆಟ್ಟಿ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ನಗರಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟಿಲ್, ಜಿಲ್ಲಾ ಆಯುಷ್ ಅಧಿಕಾರಿ ಅಲಕಾನಂದ, ಜಿಲ್ಲಾ ಸರ್ಜನ್ ಡಾ ಮಧುಸೂದನ್ ನಾಯಕ್ ಉಪಸ್ಥಿತರಿದ್ದರು.

Comments are closed.