ಕರಾವಳಿ

ದ್ವಿಚಕ್ರ ವಾಹನ ಕಳ್ಳರಿಬ್ಬರ ಬಂಧನ : ಬೈಕ್ ವಶ

Pinterest LinkedIn Tumblr

ಮಂಗಳೂರು,ಫೆಬ್ರವರಿ.4: ಕಳವು ಮಾಡಿದ ದ್ವಿಚಕ್ರ ವಾಹನವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗದಗ ಜಿಲ್ಲೆಯ ಶಿರಹಟ್ಟಿ ಗ್ರಾಮದ ಪರಸಾಪುರ ಗ್ರಾಮದ ನಿವಾಸಿಗಳಾದ ಸುರೇಶ್ ಭಜಂತ್ರಿ (21) ಹಾಗೂ ಫಕಿರೇಶ್ ಈಳಿಗೇರ (23) ಎಂದು ಗುರುತಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಬಿಜೈನ ಕೆಎಸ್‌‌‌ಆರ್‌‌ಟಿಸಿ ಬಸ್ ಸ್ಟಾಂಡ್ ಸಮೀಪ ವಾಹನ ಮಾರಾಟಕ್ಕೆ ಯತ್ನಿಸುತ್ತಿದ್ದ ಖಚಿತ ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಲೆತ್ನಿಸಿದರು. ಈ ಸಂದರ್ಭ ಇವರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೈಕ್ ಬಗ್ಗೆ ವಿಚಾರಿಸಿದಾಗ ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರದಲ್ಲಿರುವ ದಯಾ ವೈನ್ ಶಾಪ್ ಬಳಿಯಿಂದ ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರೋಪಿಗಳು ಗದಗ ಲಕ್ಷ್ಮೇಶ್ವರ ನಗರದಲ್ಲಿ ವಾಹನವನ್ನು ಕಳ್ಳತನ ನಡೆಸಿ ನಂಬರ್‌‌ ಪ್ಲೇಟ್‌‌‌ ಬದಲಾಯಿಸಿ ನಗರಕ್ಕೆ ತಂದು ಮಾರಾಟಕ್ಕೆ ಯತ್ನಿಸಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳಿಂದ ಸುಮಾರು 55,000 ಮೌಲ್ಯದ ಹೀರೋ ಫ್ಯಾಶನ್ ಪ್ರೋ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ಉಪ ವಿಭಾಗದ ಎಸಿಪಿ ಉದಯ ನಾಯಕ್ ರವರ ಮಾರ್ಗದರ್ಶನದಲ್ಲಿ ಹಾಗೂ ಬರ್ಕೆ ಠಾಣಾ ಪೊಲೀಸ್ ನಿರೀಕ್ಷಕ ರಾಜೇಶ್ ಎ.ಕೆ., ರವರ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬರ್ಕೆ ಠಾಣಾ ಅಪರಾಧ ವಿಭಾಗದ ಪಿಎಸ್‍ಐ ನರೇಂದ್ರ ಮತ್ತು ಎಎಸ್‍ಐ ಪ್ರಕಾಶ್ ಕೆ. ಹಾಗೂ ಸಿಬ್ಬಂದಿಗಳಾದ ಗಣೇಶ್, ರಾಜೇಶ್ ಅತ್ತಾವರ, ಕಿಶೋರ್ ಕೋಟ್ಯಾನ್, ಜಯರಾಮ, ಕಿಶೋರ್ ಪೂಜಾರಿ,ನಾಗರಾಜ, ಮಹೇಶ್ ಪಾಟೀಲ ಮೊಂತಾದವರು ಪಾಲ್ಗೊಂಡಿದ್ದರು.

Comments are closed.