ಕರಾವಳಿ

ಕಾಂಗ್ರೆಸ್‌ಗೆ ಹಿಡಿದಿರುವ ಶನಿ ತೊಲಗಬೇಕಾದರೆ ದಲಿತ ಮುಖ್ಯಮಂತ್ರಿಯನ್ನು ನೇಮಿಸಿ : ಪೂಜಾರಿ ಆಗ್ರಹ

Pinterest LinkedIn Tumblr

ಮಂಗಳೂರು, ಫೆಬ್ರವರಿ.2: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರವಾಗಿ ಉಳಿಯಬೇಕಾದ್ರೆ ಗೃಹ ಸಚಿವ ಪರಮೇಶ್ವರ್ ಸಿಎಂ ಆಗಬೇಕು. ಈ ಮೂಲಕ ರಾಜ್ಯದಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ್ ಪೂಜಾರಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಸರ್ಕಸ್ ಮಾಡುತ್ತಿದ್ದರೆ, ಪಕ್ಷದಲ್ಲಿ ಶನಿಯ ಪ್ರಭಾವ ಇದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಎಂದರೆ ಲೆಕ್ಕಕ್ಕೇ ಇಲ್ಲದಾಗಿದೆ. ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ಹಿಡಿದಿರುವ ಶನಿ ತೊಲಗಬೇಕಾದರೆ ಸಿದ್ದರಾಮಯ್ಯ ಅವರು ಈ ಕೂಡಲೇ ದಲಿತ ಮುಖ್ಯಮಂತ್ರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಎಸ್.ಎಂ.ಕೃಷ್ಣ ಪ್ರಕರಣದ ಬಗ್ಗೆ …

ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಸೇರಿ ಕಾಂಗ್ರೆಸ್‌‌‌ ಪಕ್ಷವನ್ನು ಸರಿ ಮಾಡಬೇಕು. ಕೃಷ್ಣ ಅವರ ಜೊತೆ ಸಿಎಂ ಮಾತನಾಡದಿದ್ದರೆ ಅವರು ಮನೆಗೆ ಹೋಗುತ್ತಾರೆ. ಪಕ್ಷ ಬಲವರ್ದನೆ ಆಗಬೇಕಿದ್ದರೆ ಸಿಎಂ ಎಲ್ಲರ ಸಲಹೆಯನ್ನು ಕೇಳಬೇಕಾಗಿದೆ. ಪಕ್ಷವನ್ನು ಕಟ್ಟಿದ್ದು ಕಾಂಗ್ರೆಸ್ ಕಾರ್ಯಕರ್ತರು. ಕಾರ್ಯಕರ್ತರನ್ನು ಸಿಎಂ ಸಿದ್ದರಾಮಯ್ಯ ಅವರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪೂಜಾರಿ ಕಿಡಿಕಾರಿದರು.

ಬಜೆಟ್ ಬಗ್ಗೆ…

ಪ್ರಸ್ತುತ ಮಂಡಿಸಿರುವ ಬಜೆಟ್ ಸಮತೋಲಿತವಾಗಿದ್ದು, ಪ್ರಧಾನಿ ಮೋದಿ ಎಲ್ಲರಿಗೂ ಸಮಾಧಾನ ಮಾಡಲು ಹೊರಟಿದ್ದಾರೆ. ಯಾವ ಸರ್ಕಾರದಿಂದಲೂ ಎಲ್ಲರನ್ನೂ ತೃಪ್ತಿ ಪಡಿಸಲು ಸಾಧ್ಯವಾಗಲಿಲ್ಲ. ಮೋದಿ ಜನರ ಆಸೆಗಳನ್ನು ಬೆಟ್ಟದೆತ್ತರಕ್ಕೆ ಕೊಂಡೊಯ್ದಿದ್ದಾರೆ. ಜನರು ಬಹಳ ಅಪೇಕ್ಷೆ ಪಟ್ಟಿದ್ದರು. ಈ ಬಜೆಟ್ನಿಂದ ಶ್ರೀಮಂತರಿಗೆ ಒಳ್ಳೆಯದಾಗಿದೆ. ಆದರೆ ಇದು ಬಡಜನರ ವಿರೋಧಿ ಬಜೆಟ್ ಎಂದು ಪೂಜಾರಿ ಹೇಳಿದರು.

ರೈತರ ಆತ್ಮಹತ್ಯೆ ಬಗ್ಗೆ…

ದೇಶದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಸಾಲ ತೀರಿಸಲು ಅವರ ಬಳಿ ಶಕ್ತಿಯಿಲ್ಲ.ರೈತರ ಆತ್ಮಹತ್ಯೆಗೆ ಬಜೆಟ್‌ನಲ್ಲಿ ಪರಿಹಾರ ಘೋಸಿಸಿಲ್ಲ, ಬಜೆಟ್ನಲ್ಲಿ ಸಾಲಮನ್ನಾ ಕುರಿತು ಘೋಷಿಸಿದ್ದರೆ ರೈತರ ಆತ್ಮಹತ್ಯೆಗಳು ಕಡಿಮೆಯಾಗುತ್ತಿದ್ದವು. ಜೇಟ್ಲಿ ಅವರು ದೇಶದ ಹಳ್ಳಿ-ಹಳ್ಳಿಗೆ ತೆರಳಿ ರೈತರು, ಬಡಜನರಲ್ಲಿ ಬಜೆಟ್ ಬಗ್ಗೆ ಕೇಳಬೇಕಿತ್ತು’ ಎಂದು ಹೇಳಿದ ಪೂಜಾರಿ, ನಮ್ಮ ರಾಜ್ಯದಲ್ಲಿ ಭೀಕರ ಬರಗಾಲ ಇದೆ. 19 ಸಂಸದರನ್ನು ಆರಿಸಿ ಕಳಿಸಿಕೊಟ್ಟಿದ್ದೇವೆ. ಇವರೆಲ್ಲ ಸೇರಿ ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಬೇಕಿತ್ತು ಎಂದು ಹೇಳಿದರು.

3ನೇ ಮಹಾಯುದ್ಧ ಬಗ್ಗೆ…

ಅಮೆರಿಕ ಸೇರಿದಂತೆ ದೊಡ್ಡ ದೊಡ್ಡ ರಾಷ್ಟ್ರಗಳು 3ನೇ ಮಹಾಯುದ್ಧಕ್ಕೆ ಬೃಹತ್ ಬಂಕರ್‌ಗಳನ್ನು ಕಟ್ಟುತ್ತಿದೆ. ಮಹಾಯುದ್ಧ ನಡೆದರೆ ಭಾರತಕ್ಕೆ ಉಳಿಗಾಲವಿಲ್ಲ. ಭಾರತವಿನ್ನೂ ಯುದ್ಧಕ್ಕೆ ತಯಾರಾಗಿಲ್ಲ. ತಯಾರಿಯನ್ನೂ ಮಾಡಿಲ್ಲ. ಹೀಗಾಗಿ ದೇಶದ ರಕ್ಷಣೆಗೆ ಪ್ರಧಾನಿ ಮುಂದಾಗಬೇಕು ಎಂದು ಪೂಜಾರಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ಪ್ರಮುಖರಾದ ಕಳ್ಳಿಗೆ ತಾರನಾಥ ಶೆಟ್ಟಿ, ಅರುಣ್ ಕುವೆಲ್ಲೋ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.