
ಮಂಗಳೂರು, ಜನವರಿ.28 : ವಾಹನಗಳ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಬರ್ಕೆ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವೇಳೆ ಬಂಧಿತನಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ವ್ಯಕ್ತಿಯನ್ನು ಮೂಡಬಿದ್ರೆಯ ತಾಕೋಡ ಗ್ರಾಮದ ಶಾಂತಿರಾಜ ಕಾಲೋನಿಯ ಪುಚ್ಚ ಮೊಗೆರು ನಿವಾಸಿ ಹರೀಶ್ ಪೂಜಾರಿ (38) ಎಂದು ಗುರುತಿಸಲಾಗಿದೆ.
ನಗರದ ಬರ್ಕೆ ಠಾಣಾ ಪೊಲೀಸರು ಸಬ್‌ಜೈಲ್ ರೋಡ್‌ನ ಗೋ ಆಸ್ಪತ್ರೆಯ ಬಳಿ ಬಿಜೈ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಲಾರಿಯ ಬ್ಯಾಟರಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ಲಾರಿಯ ಬ್ಯಾಟರಿಗಳನ್ನು ಕಳವು ಗೈದು ತರುತ್ತಿರುವ ಬಗ್ಗೆ ತಿಳಿಸಿದ್ದಾನೆ.
ನಗರದ ಹಲವು ಕಡೆಗಳಲ್ಲಿ ಬ್ಯಾಟರಿ ಕಳವು ಮಾಡಿರುವ ಬಗ್ಗೆ ಹೆಚ್ಚಿನ ವಿಚಾರಣೆಯ ವೇಳೆ ಆತ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯ ವಿರುದ್ಧ ಮೂಡಬಿದ್ರೆ, ಬಜಪೆ, ಬಂದರು ಮತ್ತು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಆರೋಪಿಯಿಂದ ಸುಮಾರು ೧೧ ಬ್ಯಾಟರಿ ಸೇರಿದಂತೆ 1,29000 ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಉದಯ ನಾಯಕ್ ಅವರ ಮಾರ್ಗದರ್ಶನದಲ್ಲಿ ಬರ್ಕೆ ಠಾಣೆ ಸಹಾಯಕ ನಿರೀಕ್ಷಿಕ ರಾಜೇಶ್ ಅವರ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಬರ್ಕೆ ಠಾಣೆಯ ಅಪರಾಧ ವಿಭಾಗ ಪಿ.ಎಸ್.ಐ ನರೇಂದ್ರ, ಎಸ್.ಐ ಪ್ರಕಾಶ್.ಕೆ ಹಾಗೂ ಕೇಂದ್ರ ಉಪ-ವಿಭಾಗದ ಅಪರಾಧ ವಿಭಾಗದ ಸಿಬ್ಬಂದಿಗಳಾದ ಗಣೇಶ್, ರಾಜೇಶ್ ಅತ್ತಾವರ, ಕಿಶೋರ್ ಕೊಟ್ಯಾನ್,ಜಯರಾಮ್, ಕಿಶೋರ್ ಪೂಜಾರಿ, ನಾಗರಾಜ, ಮಹೇಶ್ ಪಾಟಿಲ್ ಮುಂತಾದವರು ಭಾಗವಹಿಸಿದ್ದರು.
Comments are closed.