ಕರಾವಳಿ

ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಪಾರ್ತಿಸುಬ್ಬ ಪ್ರಶಸ್ತಿಗೆ ಅಯ್ಕೆ

Pinterest LinkedIn Tumblr

ಯಕ್ಷಗಾನ ಅಕಾಡಮಿಯ 2016ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟ

ಮಂಗಳೂರು, ಜನವರಿ.27: ಕರ್ನಾಟಕ ಯಕ್ಷಗಾನ ಅಕಾಡಮಿಯ 2016ನೇ ಸಾಲಿನ ಗೌರವ ಪ್ರಶಸ್ತಿ ಹಾಗು ಪಾರ್ತಿಸುಬ್ಬ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದ್ದು, ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರು ಪಾರ್ತಿಸುಬ್ಬ ಪ್ರಶಸ್ತಿಗೆ ಅಯ್ಕೆಯಾಗಿದ್ದಾರೆ.

2016ನೇ ಸಾಲಿನ ಗೌರವ ಪ್ರಶಸ್ತಿಗೆ ಸುಬ್ರಾಯ ವೆಂಕಟ್ರಮಣ ಭಟ್ಟ ಗುಂಡಿಬೈಲ್, ಹೊನ್ನಾವರ (ಬಡಾಬಡಗುತಿಟ್ಟು), ಗೋಪಾಲಕೃಷ್ಣ ಕುರುಪ್ ಬೆಳ್ತಂಗಡಿ (ತೆಂಕುತಿಟ್ಟು) ಹೆರಂಜಾಲು ಸುಬ್ಬಣ್ಣ ಗಾಣಿಗ ಕುಂದಾಪುರ (ಬಡಗುತಿಟ್ಟು), ಉಷಾರಾಣಿ ಬಳ್ಳಾರಿ (ಬಯಲಾಟ), ತುಕಾರಾಮ ಮಾರುತಿ ನಾಯಿಕ ಬೆಳಗಾವಿ (ಸಣ್ಣಾಟ), ವಿಲಾಸಬಾಯಿ ಮಾಗೆಪ್ಪ ರಾಯನ್ನವರ ಜಮಖಂಡಿ (ಶ್ರೀಕೃಷ್ಣ ಪಾರಿಜಾತ), ಚಿಕ್ಕ ಚೌಡಯ್ಯ ನಾಯ್ಕ ಮೈಸೂರು (ಮೂಡಲಪಾಯ), ನರಹರಿ ಶಾಸಿ, ಬೆಂಗಳೂರು (ಸೂತ್ರದ ಗೊಂಬೆಯಾಟ), ನಿಂಗಪ್ಪ ತೋರಣಕಟ್ಟೆ ಜಗಳೂರು (ಬಯಲಾಟ) ಹಾಗೂ ಶ್ರೀನಿವಾಸ ಸಾಸ್ತಾನ ಬೆಂಗಳೂರು (ಯಕ್ಷಗಾನ) ಆಯ್ಕೆಯಾಗಿದ್ದಾರೆ.

ನಗರದ ತುಳುಭವನದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅಕಾಡಮಿಯ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಅವರು 2016ನೇ ಸಾಲಿನ ಗೌರವ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದರು.ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಅವರು,ಜ.28ರಂದು ನಗರದ ಪುರಭವನದಲ್ಲಿ ಸಂಜೆ 6:30ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ.ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸುವರು.ಸಚಿವರಾದ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಸಚಿವ ಯು.ಟಿ. ಖಾದರ್ ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆಗೊಳಿಸುವರು. ಶಾಸಕರಾದ ಶಕುಂತಳಾ ಶೆಟ್ಟಿ ತ್ರೈಮಾಸಿಕ ‘ಬಯಲಾಟ’ ಸಂಚಿಕೆ ಬಿಡುಗಡೆಗೊಳಿಸುವರು ಎಂದು ಹೇಳಿದರು.

ಪಾರ್ತಿಸುಬ್ಬ ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಗೌರವ ಪ್ರಶಸ್ತಿಯು ತಲಾ 50 ಸಾವಿರ ರೂ. ಮತ್ತು ಪ್ರಶಸ್ತಿ ಲಕ, ನೆನಪಿನ ಕಾಣಿಕೆ ಹಾರ, ಶಾಲು ಲತಾಂಬೂಲವನ್ನು ಒಳಗೊಂಡಿದೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ವಿಧಾನ ಪರಿಷತ್ ವಿಪಕ್ಷ ಮುಖ್ಯಸಚೇತಕ ಗಣೇಶ್ ಕಾರ್ಣಿಕ್, ಸಂಸದ ನಳಿನ್ ಕುಮಾರ್ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮತ್ತಿತರು ಉಪಸ್ಥಿತರಿರುವರು ಎಂದರು.

ಸಂಜೆ 5:30ಕ್ಕೆ ಶರವು ದೇವಸ್ಥಾನದಿಂದ ಪ್ರಶಸ್ತಿ ಪುರಸ್ಕೃತರ ಮತ್ತು ಕಲಾತಂಡಗಳ ಮೆರವಣಿಗೆ ನಡೆಯಲಿದ್ದು, ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ರಾವ್ ಇದಕ್ಕೆ ಚಾಲನೆ ನೀಡಲಿದ್ದಾರೆ. ಪಟ್ಲ ಸತೀಶ್ ಶೆಟ್ಟಿ ಮತ್ತು ಜಿ.ರಾಘವೇಂದ್ರ ಮಯ್ಯ ಬಳಗದಿಂದ ಯಕ್ಷ-ಗಾನ ವೈಭವ ವೈವಿಧ್ಯ ನಡೆಯಲಿದೆ. ರಾತ್ರಿ 8:30ರಿಂದ ತೆಂಕು ತಿಟ್ಟು ಕಲಾವಿದರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ವೀರಣ್ಣ ತಿಳಿಸಿದರು.

ಅಕಾಡಮಿಯ ಸದಸ್ಯರಾದ ಪಿ. ಕಿಶನ್ ಹೆಗ್ಡೆ, ಕೆ.ಎಂ. ಶೇಖರ್, ಬಿ.ಗಣಪತಿ, ದತ್ತಾತ್ರೇಯ ಅರಳಿಕಟ್ಟೆ, ತಾರಾನಾಥ ವರ್ಕಾಡಿ, ಬಿ.ಎಸ್. ಗುರುನಾಥ್, ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.  ರವಿಕುಮಾರ್  ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.