ಕರಾವಳಿ

ಪೊಲೀಸ್ ಫೋನ್ ಇನ್ ಕಾರ್ಯಕ್ರಮ ಯಶಸ್ಸು : ಸಂಚಾರ ಸಮಸ್ಯೆಗಳಿಗೆ ಸಂಬಂಧಿಸಿ 48,464 ಪ್ರಕರಣ ದಾಖಲು

Pinterest LinkedIn Tumblr

ಮಂಗಳೂರು, ಜನವರಿ.27: ಪೊಲೀಸ್ ಫೋನ್ ಇನ್ ಕಾರ್ಯಕ್ರಮಕ್ಕೆ ಈವರೆಗೆ 403 ಕರೆಗಳು ಬಂದಿದ್ದು, ಬಹುತೇಕ ಎಲ್ಲ ಕರೆಗಳಿಗೂ ಸ್ಪಂದಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತಾಲಯದ ಕಚೇರಿಯಲ್ಲಿ ಕಳೆದ ಆಗಸ್ಟ್ 5ರಿಂದ ಆರಂಭಗೊಂಡಿರುವ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ 403 ಕರೆಗಳ ಪೈಕಿ 20 ಕರೆಗಳನ್ನು ಇತರ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಉಳಿದಂತೆ 373 ಕರೆಗಳಿಗೆ ಇಲಾಖೆ ಪೂರ್ತಿಯಾಗಿ ಸ್ಪಂದಿಸಿದ್ದರೆ, 1 ಕರೆಗಳಿಗೆ ಭಾಗಶ: ಸ್ಪಂದಿಸಲಾಗಿದೆ.

ಸಂಚಾರ ಸುವ್ಯವಸ್ಥೆಗೆ ಸಂಬಂಧಿಸಿ 261, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿ 52, ಇತರ ಇಲಾಖೆಗೆ ಸಂಬಂಧಿಸಿ 56 ಕರೆಗಳು ಬಂದಿದೆ. 34 ಕರೆಗಳಿಗೆ ನೇರ ಸ್ಪಂದಿಸಲಾಗಿದೆ ಎಂದು ಎಂ. ಚಂದ್ರಶೇಖರ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಸಂಚಾರಕ್ಕೆ ಸಂಬಂಧಿಸಿದ ಕರೆಗಳ ಪೈಕಿ ಶೇ. 45 ಪಾರ್ಕಿಂಗ್ ಸಮಸ್ಯೆ, ಶೇ.22 ಬಸ್ಗೆ ಸಂಬಂಧಿಸಿದ ಸಮಸ್ಯೆ, ಶೇ.17 ಅತೀ ವೇಗ ಮತ್ತು ನಿರ್ಲಕ್ಷತನ, ಶೇ.2 ಮೀನು ಸಾಗಾಟ ವಾಹನದ ಸಮಸ್ಯೆ, ಶೇ.14 ಇತರ ವಿಷಯಗಳಿಗೆ ಸಂಬಂಧಿಸಿದ್ದಾಗಿದೆ. ಬಸ್ ಸಂಚಾರ ಸಮಸ್ಯೆಗಳ ಪೈಕಿ ಶೇ.35 ಅತೀ ಮತ್ತು ನಿರ್ಲಕ್ಷತನದ ಚಾಲನೆ, ಶೇ.13 ಕರ್ಕಶ ಹಾರ್ನ್, ಶೇ.17 ಸೀಟಿನ ಸಮಸ್ಯೆ,ಶೇ.13 ಟಿಕೆಟ್ ಸಮಸ್ಯೆ, ಶೇ.22 ನಿಲುಗಡೆ ಸಮಸ್ಯೆಯಾಗಿದೆ ಎಂದರು.

ಸಂಚಾರ ಸುವ್ಯವಸ್ಥೆಯ ಸಮಸ್ಯೆಗಳಿಗೆ ಸಂಬಂಧಿಸಿ 48,464 ಪ್ರಕರಣ ದಾಖಲಾಗಿದ್ದು, 39,07,600 ರೂ. ವಸೂಲಿ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿ 52 ಕರೆಗಳು ಬಂದಿದ್ದು, 3,866 ಪ್ರಕರಣ ದಾಖಲಿಸಲಾಗಿದೆ. 3,79,825 ರೂ. ವಸೂಲಿ ಮಾಡಲಾಗಿದೆ. 321 ಆರೋಪಿಗಳನ್ನು ಬಂಧಿಸಿ ಕ್ರಮ ಜರಗಿಸಲಾಗಿದೆ ಎಂದರು.

ಪ್ರತೀ ಶುಕ್ರವಾರ ಬೆಳಗ್ಗೆ 10ರಿಂದ 11ರವರೆಗೆ ಫೋನ್ ಇನ್ ಕಾರ್ಯಕ್ರಮ (0824-2220801- 2220830) ನಡೆಯುತ್ತಿದೆ. ಈ ಕರೆಗಳ ಆಧಾರದ ಮೇಲೆ ಸಾರ್ವಜನಿಕರು ನೀಡಿದ ಸಲಹೆ ಸೂಚನೆಗಳಂತೆ ವಿವಿಧ ಠಾಣೆಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಂ.ಚಂದ್ರಶೇಖರ್ ಹೇಳಿದರು.

ಡಿಸಿಪಿಗಳಾದ ಕೆ.ಎಂ. ಶಾಂತರಾಜ್ ( ಕಾನೂನು ಮತ್ತು ಸುವ್ಯವಸ್ಥೆ), ಡಾ. ಸಂಜೀವ ಎಂ.ಪಾಟೀಲ್ ( ಸಂಚಾರಿ ಹಾಗೂ ಅಪರಾಧ) ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.