ಕರಾವಳಿ

ಕದ್ರಿ ಉದ್ಯಾನವನದಲ್ಲಿ ಫಲಪುಪ್ಪ ಪ್ರದರ್ಶನ ಆರಂಭ : ಗಮನ ಸೆಳೆಯುತ್ತಿರುವ ರಾಣಿ ಅಬ್ಬಕ್ಕ ಪ್ರತಿಮೆಯ ಹೂವಿನ ಪ್ರತಿಕೃತಿ

Pinterest LinkedIn Tumblr

ಮಂಗಳೂರು, ಜನವರಿ.26: ತೋಟಗಾರಿಕೆ ಇಲಾಖೆ, ದ.ಕ, ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಸಿರಿ ತೋಟಗಾರಿಕೆ ಸಂಘ(ರಿ) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲಪುಪ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಈ ಫಲಪುಷ್ಪ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿದರು.

ತೋಟಗಾರಿಕೆ ಇಲಾಖೆ ವತಿಯಿಂದ ಇತರೆ ಸರಕಾರಿ ಇಲಾಖೆಗಳು, ಬ್ಯಾಂಕ್‍ಗಳು, ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಹಕಾರದಿಂದ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಿ ಜಿಲ್ಲೆಯಲ್ಲಿ ತೋಟಗಾರಿಕೆ ಚಟುವಟಿಕೆ ಹಾಗೂ ತೋಟಗಾರಿಕೆ ಕಲೆಯನ್ನು ಸಾರ್ವಜನಿಕರಲ್ಲಿ ಉದ್ದೀಪನಗೊಳಿಸುವ ಮೂಲಕ ಜಿಲ್ಲೆಯು ತೋಟಗಾರಿಕೆಯಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಪರಿಸರ ಸಂರಕ್ಷಣೆ, ಸಾರ್ವಜನಿಕ ನೈರ್ಮಲ್ಯ, ಗ್ರಾಮ, ನಗರಗಳನ್ನು ಸುಂದರಗೊಳಿಸುವುದು, ಮೌಲ್ಯವರ್ಧನೆ ಇತ್ಯಾದಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಚಾಲನೆ ಮೂಲಕ ತೋಟಗಾರಿಕೆ ಉದ್ದಿಮೆಯನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶವನ್ನು ಹೊಂದಿದೆ.ಆರ್ಥಿಕವಾಗಿ ಲಾಭದಾಯಕವಾಗಿರುವ ತೋಟಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಅರಣ್ಯ ಇಲಾಖೆಯಿಂದಲೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಅರಣ್ಯ ವನಗಳನ್ನು ಬೆಳೆಸುವುದು, ಫ್ರೀ ಪಾರ್ಕ್, ತೋಟಗಾರಿಕೆ ಸಸ್ಯಗಳ ಸಹಿತ ಔಷಧಿ ಸಸ್ಯ ಬೆಳೆಸಲು ಪ್ರೋತ್ಸಾಹ ನೀಡುವುದು ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಈ ಫಲಪುಪ್ಪ ಪ್ರದರ್ಶನವನ್ನು ಜನವರಿ. 26 ರಿಂದ ಜನವರಿ29 ರವರೆಗೆ 4 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಫಲಪುಪ್ಪ ಪ್ರದರ್ಶನದಲ್ಲಿ ಹಲವು ವಿಶೇಷತೆಗಳಿದ್ದು, ಅದರಲ್ಲೂ ಹೂವಿನಿಂದ ಅಲಂಕರಿಸಿದ ‘’ರಾಣಿ ಅಬ್ಬಕ್ಕ ಪ್ರತಿಮೆ ’’ಯನ್ನು ವಿನ್ಯಾಸಗೊಳಿಸುವ ಮಾದರಿಯನ್ನು ವಿಶೇಷವಾಗಿ ಬಣ್ಣ ಬಣ್ಣದ ಡಚ್ ಗುಲಾಬಿಗಳು, ಕ್ರಿಸಾಂತಮಮ್ ಇನ್ನಿತರೆ ಆರ್ಕರ್ಷಣಿಯವಾದ ಹೂಗಳಿಂದ ಅಲಂಕಾರಗೊಳಿಸಿ ಪ್ರದರ್ಶಿಸಲಾಗಿದ್ದು, ರಾಣಿ ಅಬ್ಬಕ್ಕನ ಪ್ರತಿಕೃತಿ ಪ್ರಮುಖ ಆಕರ್ಷಣೆಯಾಗಿದೆ.ಅಬ್ಬಕ್ಕ ಹಾಗೂ ಕುದುರೆ ಸೇರಿ ಸುಮಾರು 10 ಅಡಿ ಎತ್ತರದ ಪ್ರತಿಕೃತಿ ರಚಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ನಿರ್ಮಿಸಿದ ಆನೆ, ಸೈನಿಕರು ಎಲ್ಲ ಸೇರಿ ಸುಮಾರು 9 ಅಡಿ ಉದ್ದ ಹಾಗೂ 4 ಅಡಿ ಅಗಲ ಜಾಗದಲ್ಲಿ ಇದನ್ನು ಸಿದ್ಧಪಡಿಸಲಾಗಿದೆ.

ತೋಟಗಾರಿಕೆ ಇಲಾಖಾ ವತಿಯಿಂದ ಬೆಳೆಸಲಾಗಿರುವ ವಿವಿಧ ಜಾತಿಯ ಆಕರ್ಷಣೀಯವಾದ ಹೂಗಳನ್ನು ಹಾಗೂ ವಿವಿಧ ಹಣ್ಣು ಮತ್ತು ತರಕಾರಿಗಳನ್ನು ಮತ್ತು ಸಾರ್ವಜನಿಕರು ಬೆಳೆದಿರುವ ಬೋನ್ಸಾಯಿ, ಅಂಥೂರಿಯಂ, ಆರ್ಕಿಡ್ ಗಿಡಗಳು ಇನ್ನಿತರೇ ಆಕರ್ಷಣೀಯವಾದ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 80 ಮಳಿಗೆಗಳನ್ನು ತೆರೆಯಲಾಗಿದ್ದು ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ಯಂತ್ರಗಳ ಮಾರಾಟಗಾರರು ಮಳಿಗೆಗಳನ್ನು ತೆರೆದಿದ್ದಾರೆ. ಸಾವಯವ ಉತ್ಪನ್ನಗಳು, ತೋಟಗಾರಿಕೆ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಹಾಗೂ ಉದ್ದಿಮೆದಾರರಿಂದ ಸಾರ್ವಜನಿಕರು ಖರೀದಿಸಲು ಹಾಗೂ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಹೋಟೆಲ್ ಸಂಘದವರಿಂದ 25 ಮಳಿಗೆಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ವಿವಿಧ ಸ್ವಾದಕರ, ರುಚಿಕರ ಆಹಾರಗಳನ್ನು ಸವಿಯಲು “ ಆಹಾರಮೇಳ” ಏರ್ಪಡಿಸಲಾಗಿದೆ. ಫಲಪುಷ್ಪ ಪ್ರದರ್ಶನದ ಅಂಗವಾಗಿ ಸುಮಾರು 12 ತಂಡಗಳಿಂದ ಪ್ರತಿ ದಿವಸ ಸಂಜೆ ಗಂಟೆ 5.30 ರಿಂದ ರಾತ್ರಿ 8.30 ಗಂಟೆಯ ವರೆಗೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿವೆ

ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ವಯಸ್ಕರಿಗೆ ರೂ.20/- ಮಕ್ಕಳಿಗೆ ರೂ.10/- ಪ್ರವೇಶ ಶುಲ್ಕ ವಿಧಿಸಲಾಗಿದೆ. ಅಧ್ಯಾಪಕರೊಂದಿಗೆ ಬರುವ ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮತ್ತು ಭಿನ್ನ ಸಾರ್ಮಥ್ಯದ ಮಕ್ಕಳಿಗೆ ನಾಲ್ಕು ದಿನವೂ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.. ಪ್ರವೇಶ ಶುಲ್ಕ ಪಾವತಿಸಲು ಸಾರ್ವಜನಿಕರ ಉಪಯೋಗಕ್ಕಾಗಿ ಹಾಪ್‍ಕಾಮ್ಸ್ ಮಳಿಗೆಗಳಲ್ಲಿ ಟಿಕೇಟ್ ಖರೀದಿಸಲು ಹಾಗೂ ನಗದು ರಹಿತ ವಹಿವಾಟಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಉದ್ಘಾಟನ ಸಮಾರಂಭದಲ್ಲಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ,ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಹರಿನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಕಾರ್ಪೊರೇಟರ್ಗಳಾದ ಶಶಿಧರ ಹೆಗ್ಡೆ, ಕವಿತಾ ಸನಿಲ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೀಶ್ ಎಚ್.ಆರ್. ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.