ಕರಾವಳಿ

ಯಶಸ್ಸುಗೊಂಡ ಕರಾವಳಿ ಯುವ ಉತ್ಸವ : ಪ್ರಶಂಸೆಗೆ ಪಾತ್ರವಾದ ವಿದ್ಯಾರ್ಥಿ,ವಿದ್ಯಾರ್ಥಿನಿಯರ ಪ್ರತಿಭಾ ಪ್ರದರ್ಶನ

Pinterest LinkedIn Tumblr

ಮ೦ಗಳೂರು ಜನವರಿ, 26 : ದಕ್ಷಿಣ ಕನ್ನಡದ ಕರಾವಳಿ ಉತ್ಸವ 2016-17 ರಲ್ಲಿ ದಕ್ಷಿಣ ಕನ್ನಡದ ಯುವ ಜನತೆಯನ್ನು ಮುಂದಿಟ್ಟು ಕೊಂಡು, ಎಲ್ಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಒಂದೇ ವೇದಿಕೆಯಲ್ಲಿ ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಯುವ ಉತ್ಸವ ಅತ್ಯಂತ ಯಶಸ್ವಿಯಾಗಿತ್ತು.

ಈ ನಿಟ್ಟಿನಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಎಂಟು ವಿಭಾಗಗಳಾದ ನೃತ್ಯ-ವೈಯಕ್ತಿಕ ಪಾಶ್ಚಾತ್ಯ, ಶಾಸ್ತ್ರೀಯ, ನವೀನ ಮತ್ತು ಸಮೂಹದಲ್ಲಿ ಜಾನಪದ, ಶಾಸ್ತ್ರೀಯ, ನವೀನ, ಗಾಯನ-ವೈಯಕ್ತಿಕ ಮತ್ತು ಸಮೂಹ, ವಾದ್ಯ ಸಂಗೀತ ವೈಯಕ್ತಿಕದಲ್ಲಿ ಪರ್ಕಶನ್ ಮತ್ತು ನಾನ್‌ಪರ್ಕಶನ್, ಕಿರುನಾಟಕ (ಸಮೂಹ), ಮೂಕಾಭಿನಯ, ಏಕಪಾತ್ರಭಿನಯ, ಚರ್ಚಾ ಸ್ಪರ್ಧೆ ಮತ್ತು ಸಾಂಪ್ರದಾಯಿಕ ಉಡುಗೆ ತೊಡುಗೆ ಪ್ರದರ್ಶನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಈ ಸ್ಪರ್ಧೆಗಳನ್ನು ನಡೆಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಅಂತೆಯೇ, ಈ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಪ್ರಕಾಶಚಂದ್ರ ಶಿಶಿಲ, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ರೂಪಾ ಕೆ ಹಾಗೂ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಶೇಷಪ್ಪ ಇವರ ದಕ್ಷ ಸಂಚಾಲಕತ್ವದಲ್ಲಿ ನಿಗಧಿತ ಸ್ಪರ್ಧೆಗಳು ಜರುಗಿದವು.

ಕದ್ರಿ ಉದ್ಯಾನವನದಲ್ಲಿ ನಡೆದ ಕರಾವಳಿ ಯುವಜನೋತ್ಸವದ ಅಂತಿಮ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಅತ್ಯದ್ಭುತ ಪ್ರದರ್ಶನವನ್ನು ನೀಡಿದರು.

ಶಾಸ್ತ್ರೀಯ ಸಂಗೀತ ಸ್ಪರ್ಧೆಗಳಲ್ಲಿ ಕೀರ್ತನ್ ಹೊಳ್ಳ, ಕೆನರಾ ಕಾಲೇಜು, ಮೃದಂಗ ವಾದನದಲ್ಲಿ ಸುನಾದ ಕೃಷ್ಣ ಅಮೈ ಕೆನರಾ ಪದವಿ ಪೂರ್ವ ಕಾಲೇಜು, ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಪ್ರಕ್ಷೀಲಾ ಜೈನ್, ಎನ್‌ಐಟಿಕೆ, ಶಮಾ ಪ್ರಣಮ್ಯ, ವಿವೇಕಾನಂದ ಕಾಲೇಜು, ಜಾನಪದ ಸಮೂಹ ನೃತ್ಯದಲ್ಲಿ ಮಹಾಂತೇಶ್ ಮತ್ತು ಬಳಗ ಗೋವಿಂದದಾಸ ಕಾಲೇಜು, ಶಾಸ್ತ್ರೀಯ ಸಮೂಹ ನೃತ್ಯದಲ್ಲಿ ದೀಪಿಕಾ ಮತ್ತು ಬಳಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ, ವಾದ್ಯ ಸಂಗೀತ ತಂತಿ ವಾದ್ಯ ವಿಭಾಗದಲ್ಲಿ ಸಹ್ಯಾದ್ರಿ ಕಾಲೇಜಿನ ಅಭಿಷೇಕ್, ಶಾರದಾ ಕಾಲೇಜಿನ ಧನಶ್ರೀ ಶಬರಾಯ, ಮೂಕಾಭಿನಯದಲ್ಲಿ ಧವಲಾ ಕಾಲೇಜಿನ ಪ್ರವೀಣ್ ಜೈನ್ ಮತ್ತು ಬಳಗ, ಚರ್ಚಾಸ್ಪರ್ಧೆ ಹಾಗೂ ಏಕಪಾತ್ರಭಿನಯದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನ ಅನುಜ್ಞ, ಕಿರುನಾಟಕ ಸ್ಪರ್ಧೆಯಲ್ಲಿ ಬೆಸೆಂಟ್ ಮಹಿಳಾ ಕಾಲೇಜಿನ ಸಾಕ್ಷಾ ಶೆಟ್ಟಿ ಮತ್ತು ಬಳಗ, ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಪ್ರದರ್ಶನದಲ್ಲಿ ಎಸ್‌ಡಿ‌ಎಂ ಗೋವಿಂದದಾಸ್ ಹಾಗೂ ಧವಲಾ ಕಾಲೇಜಿನ ಸ್ಪಧಿಗಳು ಮಿಂಚಿದರು.

ಅತ್ಯುತ್ತಮ ಕರಾವಳಿ ಯುವ ಪ್ರತಿಭೆ ಪುರಷರ ವಿಭಾಗದಲ್ಲಿ ಗೋವಿಂದದಾಸ ಕಾಲೇಜಿನ ಮಹಾಂತೇಶ್ ಹಾಗೂ ಮಹಿಳೆಯರ ವಿಭಾಗದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನ ಅನುಜ್ಞ ಪ್ರಶಸ್ತಿಗಳನ್ನು ಗಳಿಸಿದರು. ಕೆನರಾ ಕಾಲೇಜು ಮಂಗಳೂರು 2016 ರ ಅತ್ಯುತ್ತಮ ಕರಾವಳಿ ಕಾಲೇಜು ಪ್ರಶಸ್ತಿ ಕಿರೀಟವನ್ನು ಮುಡಿಗೇರಿಸಿಕೊಂಡಿತು.

ಯುವ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಈ ಕರಾವಳಿ ಯುವ ಜನೋತ್ಸವ ಭಾಗವಹಿಸಿದ ಎಲ್ಲಾ ಯುವ ಜನರಲ್ಲೂ ಹೊಸ ಹುರುಪು ಮೂಡಿಸಿ, ಮುಂದಿನ ವರ್ಷದ ಸ್ಪರ್ಧೆಗೆ ಇನ್ನೂ ಹೆಚ್ಚಿನ ಮುತುವರ್ಜಿಯಿಂದ ಭಾಗವಹಿಸುವ ಕನಸನ್ನು ಗರಿಗೆದರಿಸಿತು.

ಈ ಯುವಜನೋತ್ಸವವು ಆಯೋಜಕರು, ಪ್ರೇರಕರು, ವ್ಯವಸ್ಥಾಪಕರು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಈ ಉತ್ಸವದಲ್ಲಿ ಅಮಿತ ಉತ್ಸಾಹದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಲ್ಲೂ ಹೊಸ ಸಂಚಲನವನ್ನು ಮೂಡಿಸಿ, ಮುಂದಿನ ವರ್ಷ ಯುವ ಜನೋತ್ಸವಕ್ಕೆ ಕಾತರದಿಂದ ಕಾಯುವ ಆಶಯದೊಂದಿಗೆ ಸಂಪನ್ನಗೊಂಡಿತು.

ಈ ಉತ್ಸವದ ಕಾರ್ಯಕಾರಿ ಸಮಿತಿಯಲ್ಲಿ ಅಧ್ಯಕ್ಷರಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸಂತೋಷ್, ಕಾರ್ಯಾಧ್ಯಕ್ಷರಾಗಿ ಸಹಾಯಕ ಕಮಿಷನರ್ ಹಿಂದೂ ಧಾರ್ಮಿಕ ದತ್ತಿ ಹಾಗೂ ಉಂಬಳಿ ಇಲಾಖೆಯ ಸಹಾಯಕ ಆಯುಕ್ತೆ ಪ್ರಮೀಳಾ, ಸದಸ್ಯರಾಗಿ ಯೋಜನಾ ಸಮನ್ವಯಾಧಿಕಾರಿ ಹೇಮಲತ, ಲೀಡ್ ಕಾಲೇಜು ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ಮತ್ತಿತರರು ಇದ್ದರು.

ಯುವಜನೋತ್ಸವ ಸ್ಪರ್ಧೆಗಳ ನಿರ್ವಹಣೆಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ರೂ.3 ಲಕ್ಷ ಬಿಡುಗಡೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಅಡಿಷನ್ ನಡೆಸಿ ಪ್ರತಿ ವಿಭಾಗದಲ್ಲಿ ಒಟ್ಟು 06 ಅತ್ಯುತ್ತಮ ತಂಡಗಳನ್ನು ಯುವಜನ ಉತ್ಸವದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ಪ್ರತಿ ವಿಭಾಗದಲ್ಲಿ ಪರಿಣಿತರನ್ನು ನಿರ್ಣಯಕರಾಗಿ ಆಯ್ಕೆ ಮಾಡಲಾಗಿದ್ದು, ಯಾವುದೇ ಸ್ವಜನ ಪಕ್ಷಪಾತಕ್ಕೆ ಅವಕಾಶವಿಲ್ಲದಂತೆ ನೋಡಿಕೊಳ್ಳಲಾಗಿತ್ತು.

ವೈಯಕ್ತಿಕ ಶಾಸ್ತ್ರೀಯ ಸಂಗೀತದಲ್ಲಿ ಕೆನರಾ ಕಾಲೇಜಿನ ಕೀರ್ತನ್ ಹೊಳ್ಳ ಅವರ ಹಿಂದುಸ್ತಾನಿ ಗಾಯನ, ವಾದ್ಯ ಸಂಗೀತ (ವೈಯಕ್ತಿಕ) ಪರ್ಕಷನ್ ಇದರಲ್ಲಿ ಕೆನರಾ ಪಿ.ಯು ಕಾಲೇಜಿನ ಸುನಾದ ಕೃಷ್ಣ ಅವರ ಮೃದಂಗ ವಾದನ, ವಾದ್ಯ ಸಂಗೀತ (ವೈಯಕ್ತಿಕ) ನಾನ್ ಪರ್ಕಷನ್ ಇದರಲ್ಲಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಅಭಿಷೇಕ್ ಅವರ ಕೊಳಲು ವಾದನ, ಶಾಸ್ತ್ರೀಯ ಸಮೂಹ ನೃತ್ಯದಲ್ಲಿ ದೀಪಿಕಾ ಮತ್ತು ಬಳಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ, ಮೂಕಾಭಿನಯ (ಸಮೂಹ)ದಲ್ಲಿ ಪ್ರವೀಣ್ ಜೈನ್ ಮತ್ತು ಬಳಗ (ಧವಲಾ ಕಾಲೇಜು), ಶಾಸ್ತ್ರೀಯ ವೈಯಕ್ತಿಕ ನೃತ್ಯದಲ್ಲಿ ಪ್ರಕ್ಷಿಲಾ ಜೈನ್, ಎನ್‌ಐಟಿಕೆ, ಸಮೂಹ ಜಾನಪದ ನೃತ್ಯದಲ್ಲಿ ಮಹಾಂತೇಶ್ ಮತ್ತು ಬಳಗ, ಗೋವಿಂದದಾಸ ಕಾಲೇಜು ಇವರು ಪ್ರಥಮ ಸ್ಥಾನವನ್ನು ಪಡೆದು ಜನಮನ ಸೂರೆಗೊಂಡರು.

ಕದ್ರಿ ಉದ್ಯಾನವನದಲ್ಲಿ ನಡೆದ ಸದ್ರಿ ಉತ್ಸವದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ವಿಶೇಷವೆಂದರೆ ಈ ಯುವ ಜನೋತ್ಸವದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಸರಿಸಮಾನರಾಗಿ ಪದವಿ ಪೂರ್ವ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದದ್ದು, ಮುಂದಿನ ವರ್ಷದ ಕರಾವಳಿ ಯುವಜನ ಉತ್ಸವಕ್ಕೆ ಪ್ರೇರೇಪಣೆಯಾಗಿರುತ್ತದೆ.

ಕಾರ್ಯಕ್ರಮ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ. ಅಲ್ಪಾವಧಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕಾರ್ಯಕ್ರಮದ ಸಂಚಾಲಕರಾದ ಡಾ. ಪ್ರಕಾಶಚಂದ್ರ ಶಿಶಿಲ, ಡಾ. ರೂಪಾ ಕೆ ಹಾಗೂ ಪ್ರೋ. ಶೇಷಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇವರು ಸಹಕಾರ ನೀಡಿರುತ್ತಾರೆ. ಪ್ರಥಮ ಬಾರಿಗೆ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.

Comments are closed.