ಕರಾವಳಿ

ನಕಲಿ ಜ್ಯೋತಿಷಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಮಹಿಳೆಯರಿಂದ “ಮೌನ ನಡಿಗೆ”

Pinterest LinkedIn Tumblr

ಮಂಗಳೂರು, ಜನವರಿ.22- ಮಂಗಳೂರಿನಲ್ಲಿ ನಕಲಿ ಜ್ಯೋತಿಷಿಗಳ ಹಾವಳಿ ಮಿತಿಮೀರುತ್ತಿದೆ. ಅಮಾಯಕ ಹೆಣ್ಣುಮಕ್ಕಳನ್ನು, ಅಸಹಾಯಕ ಜನಸಾಮಾನ್ಯರನ್ನು ಗುರಿಯಾಗಿಸಿ ಕಾರ್ಯಾಚರಿಸುವ ನಕಲಿ ಜ್ಯೋತಿಷಿಗಳಿಗೆ ಈಗಾಗಲೆ ಹಲವು ಕುಟುಂಬಗಳು ಬಲಿಬಿದ್ದಿವೆ. ಹೆಣ್ಣುಮಕ್ಕಳ ಲೈಂಗಿಕ ಶೋಷಣೆಗಳು ನಡೆಯುತ್ತಿದೆ. ಇಂತಹ ನಕಲಿ ಜ್ಯೋತಿಷಿಗಳ ಹಾವಳಿ ತಡೆಯುವಂತೆ ಒತ್ತಾಯಿಸಿ ಶನಿವಾರ ಮಹಿಳೆಯರು ಮೌನ ಪ್ರತಿಭಟನೆ ನಡೆಸಿದರು.

ಇತ್ತೀಚೆಗೆ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಇಂತಹ ವಂಚನೆಯ ಪ್ರಕರಣವೊಂದನ್ನು ಸಾಕ್ಷಿಸಮೇತ ಬಯಲಿಗೆಳೆದು ಜ್ಯೋತಿಷಿಗಳ ವಂಚನೆಯತ್ತ ನಾಗರಿಕರ ಗಮನಸೆಳೆದಿದ್ದಾರೆ. ಈ ಹಿನ್ನಲೆಯಲ್ಲಿ ‘ಡಿವೈಎಫ್‌ಐ’ ಯುವತಿಯರ ಉಪಸಮಿತಿ ಮಂಗಳೂರು” ವತಿಯಿಂದ ನಕಲಿ ಜ್ಯೋತಿಷಿಗಳ ಬಗ್ಗೆ ಜಾಗೃತಿ ಮೂಡಿಸಲು, ಹಾಗೂ ಪೊಲೀಸ್ ಕಾರ್ಯಾಚರಣೆಗೆ ಒತ್ತಾಯಿಸಿ ಹಂಪನಕಟ್ಟೆ ಸಿಗ್ನಲ್ ವೃತ್ತದಿಂದ ಪೊಲೀಸ್ ಕಮೀಷನರ್ ಕಚೇರಿವರೆಗೆ ‘ಮೌನ ನಡಿಗೆ’ ನಡೆಸಿದರು.

ಮಂಗಳೂರಿನ ವಸತಿಗೃಹಗಳಲ್ಲಿ ಯಾವುದೆ ಅಧಿಕೃತ ಪರವಾನಿಗೆ ಇಲ್ಲದೆ ಕಚೇರಿ ತೆರೆದು ಜನತೆಯ ಮೌಢ್ಯತೆಯನ್ನು ನಕಲಿ ಜ್ಯೋತಿಷಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೆವ್ವ, ಪಿಶಾಚಿ ಬಾಧೆಬಿಡಿಸುವ ನೆಪದಲ್ಲಿ ಜನತೆಯ ಜೇಬಿ ಕನ್ನಹಾಕುವುದು ಅವ್ಯಾವಹತವಾಗಿ ನಡೆಯುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಮೌನ ನಡಿಗೆ’ಯ ನಂತರ ನಗರದಲ್ಲಿ ಕಾರ್ಯಾಚರಿಸುತ್ತಿರುವ ನಕಲಿ ಜ್ಯೋತಿಷಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ‘ಡಿವೈಎಫ್‌ಐ’ ಯುವತಿಯರ ಉಪಸಮಿತಿಯ ಸಂಚಾಲಕಿ ಪ್ರಮೀಳ ಶಕ್ತಿನಗರ ಅವರ ನೇತ್ರತ್ವದಲ್ಲಿ ಮಂಗಳೂರು ಪೊಲೀಸ್ ಕಮಿಷನರಿಗೆ ಮನವಿ ಸಲ್ಲಿಸಲಾಯಿತು.

Comments are closed.