ಕರಾವಳಿ

ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಜಾರಿಗೊಳಿಸಲು ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಜನವರಿ.22: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಶ್‌ನ ಸದಸ್ಯರು ಶನಿವಾರ ಬಿಜೈ ಬಸ್ ನಿಲ್ದಾಣದ ಸಮೀಪವಿರುವ ಮೆಸ್ಕಾಂನ ಪ್ರಧಾನ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸರ್ವೋಚ್ಛ ನ್ಯಾಯಾಲಯವು ಇತ್ತೀಚೆಗೆ ಗುತ್ತಿಗೆ ನೌಕರರಿಗೆ ಸಂಬಂಧಿಸಿದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕೆಂದು ಐತಿಹಾಸಿಕ ಮತ್ತು ಮಹತ್ವದ ತೀರ್ಪು ಕೊಟ್ಟಿದೆ. ನ್ಯಾಯಾಲಯವು ಸಮಾನ ಕೆಲಸಕ್ಕೆ ನೇಮಕಗೊಂಡ ಮತ್ತು ಸಮಾನ ಕರ್ತವ್ಯ ನಿರ್ವಹಿಸುತ್ತ ಜವಾಬ್ದಾರಿ ನಿರ್ವಹಿಸುವ ನೌಕರರಿಗೆ ಇತರರಿಗಿಂತ ಕಡಿಮೆ ವೇತನ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಿಂಚಿತ್ತು ಗಮನ ಹರಿಸುತ್ತಿಲ್ಲ. ಇದರಿಂದಾಗಿ ಲಕ್ಷಾಂತರ ಮಂದಿ ಗುತ್ತಿಗೆ ಕಾರ್ಮಿಕರ ಬದುಕು ಸಂಕಷ್ಟಮಯವಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪು ಜಾರಿ ಆಗುವವರೆಗೆ ಗುತ್ತಿಗೆ ಕಾರ್ಮಿಕರು ಇನ್ನಷ್ಟು ತೀವ್ರ ರೀತಿಯ ಹೋರಾಟಗಳಿಗೆ ಮುಂದಾಗಬೇಕು ಎಂದು ಸಿಐಟಿಯುನ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಅವರು ಈ ಸಂದರ್ಭ ಹೇಳಿದರು.

ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಮೆಸ್ಕಾಂ ಗುತ್ತಿಗೆ ಕಾರ್ಮಿಕರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಮೆಸ್ಕಾಂ ಗುತ್ತಿಗೆ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಮಹೇಶ್, ಸಂಘಟನೆಯ ಜಿಲ್ಲಾ ಮುಖಂಡರಾದ ಸುರೇಶ್, ಲೋಕೇಶ್ ಹೆಬ್ಬಾರ್, ಪ್ರಕಾಶ, ಕರುಣಾಕರ, ಜಯರಾಮ, ಕೇಶವ ನಾಯ್ಕ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.