ಕರಾವಳಿ

ಗಣರಾಜ್ಯೋತ್ಸವ ದಿನದಂದು ಎಲ್ಲ ಗ್ರಾಪಂಗಳಲ್ಲಿ ವಿಶೇಷ ಗ್ರಾಮಸಭೆ : ನೀತಿ ಆಯೋಗ ನಿರ್ದೇಶನ

Pinterest LinkedIn Tumblr

ಮಂಗಳೂರು, ಜನವರಿ.19: ಗಣರಾಜ್ಯೋತ್ಸವ ದಿನವಾದ ಜ.26ರಂದು ದೇಶದ ಎಲ್ಲ ಗ್ರಾಪಂಗಳಲ್ಲಿ ವಿಶೇಷ ಗ್ರಾಮಸಭೆಯನ್ನು ನಡೆಸಲು ಕೇಂದ್ರದ ನೀತಿ ಆಯೋಗವು ನಿರ್ದೇಶನ ನೀಡಿದೆ. ಅದರಂತೆ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ವಿಶೇಷ ಗ್ರಾಮಸಭೆಯನ್ನು ಆಯೋಜಿಸಲು ಎಲ್ಲ ರೀತಿಯ ಸಿದ್ಧತೆ ಮಾಡಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ನೀತಿ ಆಯೋಗದ ಮುಂದಿನ ಯೋಜನೆಯ ರೂಪುರೇಷಗಳ ಯಶಸ್ವಿಗೆ ಪ್ರತಿಯೊಬ್ಬ ಗ್ರಾಮಸ್ಥ ಆದ್ಯತೆಗಳ ವಿವರ ಅಥವಾ ಸಲಹೆಗಳನ್ನು ನೀಡುವ ಅಗತ್ಯವಿರುವುದರಿಂದ ಗ್ರಾಮಸ್ಥರು ಈ ವಿಶೇಷ ಗ್ರಾಮಸಭೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಪಂ ಸಿಇಒ ಡಾ. ಎಂ.ಆರ್. ರವಿ ಅವರು ಮಾತನಾಡಿ, 12ನೆ ಪಂಚವಾರ್ಷಿಕ ಯೋಜನೆಯು 2017ರ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿಯ ದೂರದೃಷ್ಟಿಯಂತೆ ಭಾರತದ ಪ್ರತಿಯೊಬ್ಬ ನಾಗರಿಕನ ಆದ್ಯತೆಯನ್ನು ಪರಿಗಣಿಸಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ 15 ವರ್ಷಗಳ ದೂರದೃಷ್ಟಿಯಿಂದ ಯೋಜನೆಯನ್ನು ತಯಾರಿಸಬೇಕು ಎಂಬುದು ನೀತಿ ಆಯೋಗದ ಉದ್ದೇಶವಾಗಿದೆ.ಈ ನಿಟ್ಟಿನಲ್ಲಿ ಜ.26ರಂದು ನಡೆಯುವ ವಿಶೇಷ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಮೂಲಭೂತ ಸೌಕರ್ಯ, ಆರೋಗ್ಯ, ನೈರ್ಮಲ್ಯ, ಶಿಕ್ಷಣ, ಉದ್ಯೋಗ ಇತ್ಯಾದಿ ಬಗ್ಗೆ ಸಲಹೆ-ಸೂಚನೆಗಳನ್ನು ನೀಡಬಹುದಾಗಿದೆ ಎಂದು ಹೇಳಿದರು.

ಎಲ್ಲ ಗ್ರಾಪಂ ಪಿಡಿಒ-ಕಾರ್ಯದರ್ಶಿಗಳು ಗ್ರಾಮಸಭೆಯಲ್ಲಿ ಮಂಡನೆಯಾದ ನಾಗರಿಕರ ಅಹವಾಲುಗಳನ್ನು ಸಂಕ್ಷಿಪ್ತವಾಗಿ 1 ಪುಟದಲ್ಲಿ ವಿವರಿಸಿ ಜಿಪಂಗೆ ಕಳುಹಿಸಿಕೊಡಬೇಕು. ಅದನ್ನು ಜಿಪಂ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಿದೆ. ಆ ಬಳಿಕ ‘ಭಾರತೀಯ ನಾಗರಿಕನ ದೃಷ್ಟಿಕೋನ’ದ ಬಗ್ಗೆ ಕೇಂದ್ರ ಯೋಜನೆ ರೂಪಿಸಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ ಉಪಸ್ಥಿತರಿದ್ದರು.

Comments are closed.