ಕರಾವಳಿ

ಎತ್ತಿನಹೊಳೆ ಕೆಲವರು ದುಡ್ಡು ಮಾಡಲು ರೂಪಿಸಿರುವ ಯೋಜನೆ : ಸಿ.ಟಿ.ರವಿ ಆರೋಪ

Pinterest LinkedIn Tumblr

ಮಂಗಳೂರು: ಎತ್ತಿನಹೊಳೆ ಯೋಜನೆಗೆ ಈಗಾಗಲೇ 2,300 ಕೋಟಿ ವೆಚ್ಚ ಮಾಡಲಾಗಿದೆ. ಆದರೆ ಎತ್ತಿನಹೊಳೆ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಒಂದು ಹನಿ ನೀರು ಕೂಡಾ ಸಿಗುವುದಿಲ್ಲ. ಬಿಳಿ ಆನೆ ಆಗಿರುವ ಎತ್ತಿನಹೊಳೆ ಕೆಲವರ ಜೇಬು ತುಂಬಿಸಲು ರೂಪಿಸಿರುವ ಯೋಜನೆಯಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಾಡಿ ಮಾಡಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಕುರಿತು ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಹೆಚ್ಚುವರಿ ನೀರು ಇದ್ದರೆ ಬರಪೀಡಿತ ಪ್ರದೇಶಕ್ಕೆ ನೀಡಬೇಕೆಂಬ ನಿಲುವಿಗೆ ಬಿಜೆಪಿ ಬದ್ಧವಾಗಿದೆ. ಆದರೆ ಯಾವುದೇ ಪ್ರದೇಶವನ್ನು ಬರಡು ಮಾಡಿ ನೀರು ನೀಡುವುದಲ್ಲ. 2011ರಲ್ಲಿ 8.300 ಕೋಟಿಯ ಈ ಯೋಜನೆಗೆ ಆಗಿನ ಬಿಜೆಪಿ ಸರಕಾರ ಅನುಮೋದನೆ ನೀಡಿತ್ತು. ಆದರೆ ಹಣ ಬಿಡುಗಡೆ ಮಾಡಿರಲಿಲ್ಲ. ಯೋಜನೆಗೆ ಪರಿಸರ ಇಲಾಖೆ ಅನುಮತಿ ಇಲ್ಲ. ಸಮರ್ಪಕ ಯೋಜನಾ ವರದಿ ಇಲ್ಲ. ಒಟ್ಟು ಯೋಜನೆಯಲ್ಲಿಯೇ ಗೊಂದಲ ಇದೆ. ಈ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆ ಕುರಿತಂತೆ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಹೇಳುವಂತೆ ಎತ್ತಿನಹೊಳೆಯಿಂದ 24 ಟಿಎಂಸಿ ನೀರು ಸಿಗುವುದಿಲ್ಲ. ಕೇವಲ 9.55 ಟಿಎಂಸಿ ನೀರು ಸಿಗುವುದು. ಈ ಹಿನ್ನೆಲೆಯಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮತ್ತು ತಜ್ಞರಿರುವ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿ ಯೋಜನೆಯ ಟೆಂಡರ್ ರದ್ದುಗೊಳಿಸಿದ್ದರು.

ಆದರೆ 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ವರದಿ ಬರುವ ಮೊದಲೇ ಯೋಜನಾ ವೆಚ್ಚವನ್ನು 13 ಸಾವಿರ ಕೋಟಿಗೇರಿಸಿ ಹಣ ಬಿಡುಗಡೆಗೊಳಿಸಿದೆ. ಸರಕಾರ ಯಾವುದೇ ಸಮರ್ಪಕ ಮಾಹಿತಿ ನೀಡದೆ ಕರಾವಳಿ ಮತ್ತು ಬಯಲು ಸೀಮೆಯ ಜನರನ್ನು ವಂಚಿಸಿ, ವೀರಪ್ಪ ಮೊಯ್ಲಿಯವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಹಾಗೂ ಚುನಾವಣಾ ಫಂಡ್‌ಗಾಗಿ ಮಾತ್ರ ಈ ಯೋಜನೆಯನ್ನು ಬೆಂಬಲಿಸುತ್ತಿದೆ ಎಂದು ಸಿ.ಟಿ.ರವಿ ಹೇಳಿದರು.

ವಿವಿಗಳಲ್ಲಿ ನಡೆದಿರುವ 500 ಕೋಟಿ ಅವ್ಯವಹಾರದ ತನಿಖೆಗೆ ಆಹ್ರಹ:

ಉನ್ನತ ಶಿಕ್ಷಣ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರು ವಿವಿಗಳಲ್ಲಿ 500 ಕೋಟಿ ಅವ್ಯವಹಾರವಾಗಿದೆ ಎಂದು ಬಹಿರಂಗವಾಗಿ ಹೇಳುವ ಧೈರ್ಯ ತೋರಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ರಾಜ್ಯದ 17 ವಿವಿಗಳಲ್ಲಿ ನಡೆದಿರುವ 500 ಕೋಟಿ ಅವ್ಯವಹಾರದ ಕುರಿತು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ಆರು ತಿಂಗಳೊಳಗೆ ವರದಿ ಪಡೆಯಬೇಕು ಎಂದು ತಾನು ಒತ್ತಾಯಿಸುವುದಾಗಿ ಸಿ.ಟಿ.ರವಿ ತಿಳಿಸಿದರು.

ಈ ಎಲ್ಲಾ ಅವ್ಯವಹಾರಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ಆರೋಪಿಸಿ ಅವರು, ರಾಜ್ಯದಲ್ಲಿ ಹಂಸರಾಜ್ ಭಾರದ್ವಾಜ್ ರಾಜ್ಯಪಾಲರಾಗಿದ್ದಾಗ ವಿವಿಗಳ ಆಡಳಿತ ಅಧಃಪತನಗೊಂಡು, ಯೋಗ್ಯತೆ ಇಲ್ಲದವರನ್ನು ಕೂಡಾ ಕುಲಪತಿಗಳನ್ನಾಗಿ ನೇಮಿಸಲಾಗಿದೆ. ಸರಕಾರದ ಕೆಲ ಮಂದಿ ರಾಜಭವನದೊಂದಿಗೆ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ. ಹಗರಣದ ಕುರಿತು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎನ್ ಯೋಗೀಶ್ ಭಟ್, ಮೋನಪ್ಪ ಭಂಡಾರಿ, ಬ್ರಿಜೇಶ್ ಚೌಟ,ಉಮನಾಥ್ ಕೋಟ್ಯಾನ್ ಹಾಗೂ ಸುಲೋಚನಾ ಭಟ್ ಉಪಸ್ಥಿರಿದ್ದರು.

Comments are closed.