ಕರಾವಳಿ

ಮಕ್ಕಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು: ಪೊಲೀಸ್ ಕಮಿಷನರ್

Pinterest LinkedIn Tumblr

ಮಂಗಳೂರು, ಜನವರಿ. 19: ಸಾರಿಗೆ ಇಲಾಖೆ ಮತ್ತು ದ.ಕ. ಪೊಲೀಸ್ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ 28ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದ ಬುಧವಾರ ನಗರದ ಪೊಲೀಸ್ ಸಮುದಾಯ ಭವನದಲ್ಲಿ ನಡೆಯಿತು.

ಸಮಾರೋಪ ಭಾಷಣ ಮಾಡಿದ ಮಂಗಳೂರು ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ಅವರು, ಮಕ್ಕಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.ತಮ್ಮ ಭಾಷಣ ವೇಳೆಯಲ್ಲಿ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಕುರಿತು ಸಣ್ಣ ಕ್ವಿಜ್ ನಡೆಸಿದ ಪೊಲೀಸ್ ಕಮಿಷನರ್ ಚಂದ್ರಶೇಖರ್, ಕ್ವಿಜ್ನಲ್ಲಿ ವಿಜೇತ ಮಕ್ಕಳಿಗೆ ಮಾತ್ರವಲ್ಲದೆ ನೆರೆದ ಎಲ್ಲ ವಿದ್ಯಾರ್ಥಿಗಳಿಗೆ ಎರಡೆರಡು ಕ್ಯಾಡ್ಬರಿ ಚಾಕಲೇಟ್ ವಿತರಿಸುವ ವ್ಯವಸ್ಥೆ ಮಾಡಿದರು.

ಮಂಗಳೂರು ಮೇಯರ್ ಹರಿನಾಥ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಪೊಲೀಸ್ ಇಲಾಖೆ ನಿಷ್ಠುರ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ನಗರದಲ್ಲಿ 40 ಅಡಿ ಅಗಲದ ರಸ್ತೆ ನಿರ್ಮಿಸಿದರೆ 20 ಅಡಿ ವಾಹನಗಳ ಪಾರ್ಕಿಂಗ್ಗೆ ಹೋಗುತ್ತಿದೆ. ಮತ್ತೆ ಉಳಿದ 20 ಅಡಿ ಅಗಲದಲ್ಲೇ ವಾಹನಗಳು ಓಡಾಟ ನಡೆಸಬೇಕು. ಇದರಿಂದ ರಸ್ತೆ ಅಗಲ ಮಾಡಿದರೂ ಟ್ರಾಫಿಕ್ ಜಾಮ್ ತಪ್ಪಿಸಲು ಸಾಧ್ಯವಾಗಿಲ್ಲ. ಪಾರ್ಕಿಂಗ್ಗೆ ನಿಗದಿಪಡಿಸಿದ ಸ್ಥಳವನ್ನು ಬಿಟ್ಟು ರಸ್ತೆ ಬದಿಯಲ್ಲೇ ವಾಹನಗಳು ಪಾರ್ಕಿಂಗ್ ಮಾಡುವ ಚಾಲಕರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮೇಯರ್ ಹೇಳಿದರು.

ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತೆಯ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿಭಾಗದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮೇಯರ್ ಹರಿನಾಥ್ ಹಾಗೂ ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ಬಹುಮಾನ ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಐಜಿ ಹರಿಶೇಖರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ, ಡಿಸಿಪಿ ಸಂಜೀವ ಪಾಟೀಲ್, ಉಪ ಪೊಲೀಸ್ ಆಯುಕ್ತ ಕೆ. ತಿಲಕಚಂದ್ರ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್. ಎಂ. ವರ್ಣೇಕರ್, ಚೀರ್ಫ್ ವಾರ್ಡನ್ ಜೋ ಗೊನ್ಸಾಲಿಸ್, ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ಅಜೀಝ್ ಪಾರ್ತಿಪಾಡಿ, ರಾಜ್ಯ ಬಸ್ ಮಾಲಕರ ಒಕ್ಕೂಟದ ಉಪಾಧ್ಯಕ್ಷ ಎ.ಕೆ. ಜಯರಾಮ್ ಮುಂತಾದವರು ಉಪಸ್ಥಿತರಿದ್ದರು.

Comments are closed.