ಕರಾವಳಿ

ಸ್ಕಿಲ್‌ಗೇಮ್, ವೀಡಿಯೋಗೇಮ್, ಜುಗಾರಿ ಅಡ್ಡೆ, ಮಸಾಜ್ ಪಾರ್ಲರ್‌ಗಳನ್ನು ಶಾಶ್ವತವಾಗಿ ಮುಚ್ಚಲು ಆಗ್ರಹಿಸಿ ಜ.16ರಂದು ಪ್ರತಿಭಟನೆ

Pinterest LinkedIn Tumblr

ಮಂಗಳೂರು : ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯೊಳಗೆ ದಿನೇ ದಿನೇ ಸ್ಕಿಲ್‌ಗೇಮ್, ವೀಡಿಯೋಗೇಮ್, ಜುಗಾರಿ ಅಡ್ಡೆ, ಮಸಾಜ್ ಪಾರ್ಲರ್‌ಗಳು ರಾಜಾರೋಷವಾಗಿ ಕಾರ್‍ಯಚರಿಸುತ್ತಿದೆ. ರಿಕ್ರಿಯೇಶನ್ಸ್ ಕ್ಲಬ್‌ನ ಹೆಸರಿನಲ್ಲಿ ಪರವಾನಿಗೆ ಪಡೆದು ಅಕ್ರಮವಾಗಿ ಜೂಜುಕೇಂದ್ರಗಳನ್ನು ನಡೆಸಿ ಮೋಸದಾಟಕ್ಕೆ ಜನರನ್ನು ಬಲಿ ಪಡೆಯುತ್ತಿದೆ.

ಸುಮಾರು ನೂರಕ್ಕೂ ಮಿಕ್ಕಿ ಜೂಜುಕೇಂದ್ರಗಳು ಮಂಗಳೂರು ನಗರದಲ್ಲಿ ನಿಯಮಗಳನ್ನು ಮೀರಿ ಅಕ್ರಮ ಆಟಗಳನ್ನು ಆಡಿಸಿ ಜನರಿಂದ ಹಣ ದೋಚುವ ಕಾಯಕದಲ್ಲಿ ತೊಡಗಿದೆ. ಇವರ ಈ ಮೋಸದಾಟಕ್ಕೆ ಸಿಲುಕಿದ ಬಹಳಷ್ಟು ಕುಟುಂಬಗಳು ತಮ್ಮ ಮನೆ, ಮಠ, ಅಮೂಲ್ಯ ಸೊತ್ತುಗಳನ್ನು ಕಳಕೊಂಡು ಬೀದಿಗೆ ಬಿದ್ದಿವೆ. ಇಂತಹ ಅಕ್ರಮ ಜೂಜುಕೇಂದ್ರಗಳ ವಿರುದ್ಧ ಸಾರ್ವಜನಿಕರು ಬಹಳಷ್ಟು ವಿರೋಧ ವ್ಯಕ್ತಪಡಿಸಿದ್ದರೂ ಸ್ಥಳೀಯ ಠಾಣೆಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಬರೀ ತೋರಿಕೆಗಷ್ಟೇ ಬಂದ್ ಮಾಡುವ ನಾಟಕ ಮಾಡಿ ಮತ್ತೆ ಕೆಲದಿನದ ನಂತರ ಯಥಾಸ್ಥಿತಿಯಾಗಿ ಜೂಜುಕೇಂದ್ರಗಳು ಕಾರ್‍ಯಚರಿಸುತ್ತವೆ. ಇಂತಹ ಜೂಜು ಕೇಂದ್ರಗಳು ರಾಜಾರೋಷವಾಗಿ ನಡೆಯಲು ಸ್ಥಳೀಯ ಪೊಲೀಸರ ಸಹಕಾರ ಕೂಡಾ ಇದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈ ರೀತಿಯ ಮೋಸದಾಟದಲ್ಲಿ ಹಣ ಕಳೆದುಕೊಂಡ ಯುವಕರು ಮುಂದೆ ಹತಾಶರಾಗಿ ಸಮಾಜಘಾತುಕ ಕೃತ್ಯಗಳಲ್ಲಿ ಭಾಗವಹಿಸುವುದರ ಮೂಲಕ ನಗರದಲ್ಲಿ ಅಪರಾಧ ಕೃತ್ಯಗಳು ಮಿತಿಮೀರುತ್ತಿದೆ.

ಆದ್ದರಿಂದ ಸಮಾಜ ಸ್ವಾಸ್ಥ್ಯವನ್ನು ಹಾಳುಮಾಡುವಂತಹ ಹಾಗೂ ಹತಾಶ ಯುವಜನರನ್ನು ಅಪರಾಧ ಕೃತ್ಯಗಳಿಗೆ ದೂಡುವಂತಹ ಸ್ಕಿಲ್‌ಗೇಮ್, ವೀಡಿಯೋಗೇಮ್, ಜುಗಾರಿ ಅಡ್ಡೆಗಳು ಹಾಗೂ ಮಸಾಜ್ ಪಾರ್ಲರ್‌ಗಳನ್ನು ಶಾಶ್ವತವಾಗಿ ಮುಚ್ಚಲು ಒತ್ತಾಯಿಸಿ ಜ.16ರ ಬೆಳಗ್ಗೆ 10:30ಕ್ಕೆ ನಗರದ ಮಿನಿವಿಧಾನ ಸೌಧದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಡಿವೈ‌ಎಫ್‌ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.