ಕರಾವಳಿ

“ವಿವೇಕಾನಂದ ರಸ್ತೆ” ನಾಮಫಲಕ ತೆರವು : ಮೇಯರ್ ವಿರುದ್ಧ ರೂಪಾ ಬಂಗೇರಾ ಆಕ್ರೋಷ

Pinterest LinkedIn Tumblr

File Photo

ಮಂಗಳೂರು : ಕದ್ರಿಯ ವಿವೇಕಾನಂದ ರಸ್ತೆಗೆ “ವಿವೇಕಾನಂದ ರಸ್ತೆ” ಎಂದು ನಮೂದಿಸಿ ಗುರುವಾರ ಅಳವಡಿಸಿದ ಹೊಸ ನಾಮಫಲಕವನ್ನು ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಕಿತ್ತೆಸೆಯುವ ಮೂಲಕ ವಿವೇಕಾನಂದರಿಗೆ ಅಪಮಾನ ಮಾಡಿದೆ. ಪಾಲಿಕೆ ಸರ್ವಾಧಿಕಾರಿ ನೀತಿ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದೆಂದು ಮನಪಾ ಪ್ರತಿಪಕ್ಷ ನಾಯಕಿ ರೂಪಾ.ಡಿ.ಬಂಗೇರ ತಿಳಿಸಿದ್ದಾರೆ.

ಕದ್ರಿ ಉದ್ಯಾನವನ ಮುಂಭಾಗದ ರಸ್ತೆಗೆ ಹಿಂದಿನಿಂದಲೂ ವಿವೇಕಾನಂದ ರಸ್ತೆ ಎಂದು ಹೆಸರಿತ್ತು. ಮನಪಾ ದಾಖಲೆಗಳಲ್ಲೂ ಇದೇ ಹೆಸರಿದೆ. ಇಲ್ಲಿನ ಅಡ್ಡ ರಸ್ತೆಗಳಿಗೆ ವಿವೇಕಾನಂದ ಅಡ್ಡ ರಸ್ತೆ ಎನ್ನುವ ಫಲಕವಿದೆ. ಜನರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಸ್ಥಳೀಯ ಕಾರ್ಪೋರೇಟರ್ ನಿಧಿಯಿಂದ ಹೊಸ ನಾಮಫಲಕ ಅಳವಡಿಸಲಾಗಿತ್ತು.

ಸ್ವಾಮಿ ವಿವೇಕಾನಂದ ರಸ್ತೆ ಹೆಸರಿನ ಜತೆ ಕದ್ರಿ ಪಾರ್ಕ್ ಮತ್ತು ಕದ್ರಿ ಯೋಗೀಶ್ವರ ಮಠ ಎಂದು ನಾಮಫಲಕದಲ್ಲಿ ನಮೂದಿಸಲಾಗಿತ್ತು. ಕದ್ರಿ ಯೋಗೀಶ್ವರ ಮಠದ ಸ್ವಾಮೀಜಿ ನಾಮಫಲಕವನ್ನು ಅನಾವರಣ ಮಾಡಿದ್ದರು.

ಆದರೆ ಸಾಯಂಕಾಲ ಮನಪಾ ಅಧಿಕಾರಿಗಳು ಏಕಾ‌ಏಕಿ ಈ ನಾಮಫಲಕವನ್ನು ತೆರವುಗೊಳಿಸಿದ್ದಾರೆ. ಮೇಯರ್ ಸೂಚನೆ ಮೇರೆಗೆ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿವೇಕಾನಂದ ಜಯಂತಿ ದಿನವೇ ಅವರ ಹೆಸರಿನ ನಾಮಫಲಕವನ್ನು ತೆರವುಗೊಳಿಸಿದ ಮೇಯರ್ ಅವರ ಸರ್ವಾಧಿಕಾರಿ ವರ್ತನೆ ಖಂಡನೀಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.