ಉಡುಪಿ: ಕರಾವಳಿ ಕಾವಲು ಪೊಲೀಸರಿಗೆ ವಿಶೇಷ ತರಬೇತಿ ನೀಡುವ ಉದ್ದೇಶದಿಂದ ಉಡುಪಿಯಲ್ಲಿ ಮರೈನ್ ಪೊಲೀಸ್ ತರಬೇತಿ ಕೇಂದ್ರ ತೆರೆಯಲಾಗುವುದು ಎಂದು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಅವರು ಶುಕ್ರವಾರ ಗಂಗೊಳ್ಳಿಯಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಕಾವಲು ಪೊಲೀಸರಿಗೆ ಬಲ ನೀಡ್ತೇವೆ…
ಕರಾವಳಿ ಪ್ರದೇಶದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಕರಾವಳಿ ಕಾವಲು ಪಡೆಗೆ ವಿಶೇಷ ತರಬೇತಿ ನೀಡುವ ಅವಶ್ಯಕತೆಯಿದೆ, ಕರಾವಳಿ ಪೊಲೀಸರಿಗೆ ಸಮುದ್ರದಲ್ಲಿ ಈಜುವ ಬಗ್ಗೆ, ಸಮುದ್ರದಲ್ಲಿ ಆಪತ್ತಿನಲ್ಲಿರುವವರನ್ನು ರಕ್ಷಿಸುವ ಬಗ್ಗೆ ವಿಶೇಷ ತರಬೇತಿಯ ಅಗತ್ಯವಿದೆ; ಈ ಕುರಿತು ಮರೈನ್ ಪೊಲೀಸ್ ತರಬೇತಿ ಕೇಂದ್ರ ಪ್ರಾರಂಭಿಸಲು ಈಗಾಗಲೇ ಐರೋಡಿ ಕೋಡಿಯಲ್ಲಿ 25 ಎಕರೆ ಜಾಗ ಗುರುತಿಸಲಾಗಿದೆ, ಅಲ್ಲದೇ ಸಮುದ್ರದ ಬಗ್ಗೆ ಮಾಹಿತಿ ಇರುವವರನ್ನು ಈ ಪಡೆಗೆ ಸೇರಿಸಿಕೊಳ್ಳುವ ಉದ್ದೇಶದಿಂದ ಕರಾವಳಿ ತೀರದ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು ಹಾಗೂ ಕರಾವಳಿ ಕಾವಲು ಪಡೆಯ ಸಮವಸ್ತ್ರವನ್ನು ಬದಲಾಯಿಸುವ ಚಿಂತನೆ ಇದೆ ಎಂದು ಸಚಿವರು ತಿಳಿಸಿದರು. ರಾಜ್ಯದ 350 ಕಿ.ಮೀ ವ್ಯಾಪ್ತಿಯ ಕರಾವಳಿ ಪ್ರದೇಶದಲ್ಲಿ ಸೂಕ್ತ ಭದ್ರತೆ ಮಾತ್ರವಲ್ಲದೇ, ಸಮುದ್ರದಲ್ಲಿ ಸಂಕಷ್ಟದಲ್ಲಿರುವ ಮೀನುಗಾರರನ್ನು ರಕ್ಷಿಸುವ ಉದ್ದೇಶದಿಂದ ಕರಾವಳಿ ಕಾವಲು ಪಡೆಗೆ ಹೆಲಿಕ್ಯಾಪ್ಟರ್ ಒಗದಿಸುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಪೊಲೀಸರು ಶಿಸ್ತು ಮೀರಬೇಡಿ…….
ರಾಜ್ಯದಲ್ಲಿ ಪೊಲೀಸರ ವೇತನ ಹೆಚ್ಚಳ ಕುರಿತಂತೆ ಔರಾದ್ಕರ್ ಸಮಿತಿ ನೀಡಿರುವ ವರದಿಯಲ್ಲಿನ ಶಿಫಾರಸ್ಸುಗಳನ್ನು ವೇತನ ಆಯೋಗ ರಚನೆಯ ಸಂದರ್ಭದಲ್ಲಿ ಸೇರಿಸಲಾಗುವುದು, 2017 ರಲ್ಲಿ ವೇತನ ಅಯೋಗ ರಚನೆಯಾಗಲಿದೆ, ಪೊಲೀಸರಿಗೆ ಫೆಬ್ರವರಿ ತಿಂಗಳಿನಿಂದ ರೂ.2000 ಗಳ ವಿಶೇಷ ಭತ್ಯೆಯನ್ನು ಮಂಜೂರು ಮಾಡಲಾಗುವುದು, ಪೊಲೀಸ್ ಇಲಾಖೆ ಶಿಸ್ತಿಗೆ ಹೆಸರಾಗಿದ್ದು, ಯಾವುದೇ ಕಾರಣಕ್ಕೂ ಪೊಲೀಸರ ಶಿಸ್ತು ಉಲ್ಲಂಘನೆ ಸಲ್ಲದು, ಪೊಲೀಸ್ ಸಿಬ್ಬಂದಿಯ ಎಲ್ಲಾ ರೀತಿಯ ಮನವಿಗಳಿಗೆ ಸ್ಪಂದಿಸಲಾಗುವುದು ಎಂದು ಸಚಿವರು ಹೇಳಿದರು.
ಪೊಲೀಸರಿಗೆ ಪ್ರಮೋಷನ್ ಭಾಗ್ಯ….
ತಮ್ಮ ಸರ್ಕಾರ ಬಂದ ನಂತರ 20,000 ಕಾನ್ಸ್‌ಟೇಬಲ್‌ಗಳ ನೇಮಕ ಆಗಿದೆ, 1000 ಎಸ್.ಐ ಗಳ ನೇಮಕ ಪ್ರಕ್ರಿಯೆ ನಡೆಯುತ್ತಿದೆ, ಪೊಲೀಸರಿಗೆ 110000 ಮನೆಗಳ ವಸತಿ ಗೃಹ ನಿರ್ಮಾಣ ಕಾಮಗಾರಿ ನಡೆಯುತ್ತಿದೆ, ಪೊಲೀಸ್ ಸಿಬ್ಬಂದಿ ಕೊರತೆ ನೀಗಿಸಲಾಗಿದೆ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗುತ್ತಿದ್ದು, ಈ ಠಾಣೆಗಳಲ್ಲಿ ಮಹಿಳಾ ಪೊಲೀಸರೇ ಎಲ್ಲಾ ರೀತಿಯ ಕರ್ತವ್ಯ ನಿರ್ವಹಿಸಲಿದ್ದಾರೆ, 10 ವರ್ಷ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಪ್ರಮೋಷನ್ ನೀಡಲು ಕ್ರಮ ಕೈಗೊಂಡಿದ್ದು, 11,000 ಮಂದಿಗೆ ಪ್ರಮೋಷನ್ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಪೊಲೀಸರ ವೇತನ ಹೆಚ್ಚಳ, ಕರಾವಳಿ ಕಾವಲು ಪೊಲೀಸರಿಗೆ ಹ್ಯಾಲಿಕಾಪ್ಟರ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆ, ಸಮುದ್ರದಲ್ಲಿ ಕೆಲಸ ಮಾಡಬಲ್ಲ ಮೀನುಗಾರ ಯುವಕರಿಗೆ ಈ ಪಡೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.
ಆಂತರಿಕಾ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಶಾಸಕ ಕೆ.ಪ್ರತಾಪಚಂದ್ರ ಶೆಟ್ಟಿ, ರಾಜ್ಯ ಅಲ್ಪ ಸಂಖ್ಯಾತರ ನಿಗಮ ಅಧ್ಯಕ್ಷ ಗಫೂರ್, ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಹರಿಶೇಖರನ್ ಪಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಗಂಗೊಳ್ಳಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ ಬಾಲಕೃಷ್ಣ ಸ್ವಾಗತಿಸಿದರು, ಕರಾವಳಿ ಕಾವಲು ಪಡೆಯ ಪೊಲೀಸ್ ಉಪಾಧೀಕ್ಷಕ ಟಿ.ಆರ್. ಜೈಶಂಕರ್ ವಂದಿಸಿದರು. ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ನ ಬಿ. ಮನಮೋಹನ ರಾವ್ ನಿರೂಪಿಸಿದರು.
ಲೇಖಕ ರಾಜಶೇಕರ್ ಪ್ರಶಸ್ತಿ ವಾಪಾಸ್ ಮಾಡಿದ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಬಳಿಕ ಪ್ರತಿಕ್ರಿಯೆ ನೀಡುವೆ. ಅಸಹಿಷ್ಣುತೆ ಇದೆಯೆಂದು ಅವರು ಹೇಳಿದ್ದರೇ ಯಾವ ವಿಚಾರಕ್ಕೆ ಅವರು ಹಾಗೇ ಹೇಳಿದರು ಎಂಬುದು ನನ್ನ ಗಮನಕ್ಕಿಲ್ಲ. ಮಾಧ್ಯಮದವರು ಹೇಳಿದರೆಂದು ನಾನದಕ್ಕೆ ಪ್ರತಿಕ್ರಿಸಲ್ಲ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಕುಂದಾಪುರದ ಗಂಗೊಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕರಾವಳಿ ಕಾವಲು ಪೊಲೀಸ್ ಠಾಣೆ ಗಂಗೊಳ್ಳಿ ಇದರ ಉದ್ಘಾಟನೆಗೆ ಆಗಮಿಸಿದ ವೇಳೆ ಅವರು ಮಾಧ್ಯಮದ ಜೊತೆ ಮಾತನಾಡಿದರು.
ಇದೇ ಸಂದರ್ಭ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ವರ್ಷಗಳಿಂದ ರಾಜ್ಯದಲ್ಲಿ ಕೋಮುಗಲಭೆಗಳಂತಹ ಚಟುವಟಿಗೆಗಳು ಕಮ್ಮಿಯಾದ ಬಗ್ಗೆ ನನ್ನ ಬಳಿ ಅಂಕಿಅಂಶಗಳಿದೆ. ಕಮ್ಯೂನಲ್ ವಿಚಾರಗಳು ಕಡಿಮೆಯಾಗಿದ್ದು ಉತ್ತಮ ವಿಚಾರವಾಗಿದ್ದು ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುವ್ಯವಸ್ಥಿತವಾಗಿದ್ದು ಅದನ್ನು ಸಹಿಸಲಾಗದ ಕೆಲವರು ಟೀಕೆ ಮಾಡುತ್ತಿದ್ದಾರೆ. ಠೀಕಿಸುವುದು ಅವರ ಕೆಲಸವಾಗಿದ್ದು ಆ ಠೀಕೆಗಳನ್ನು ನಾವು ಗಂಭೀರವಾಗಿ ಪರಿಗಣಿಸಲ್ಲ. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಇನ್ನು ಉಡುಪಿಯಲ್ಲಿ ಮೆರೈನ್ ಪೊಲೀಸ್ ಟ್ರೈನಿಂಗ್ ಅಕಾಡೆಮಿ ತೆಗೆಯಲಾಗುವುದು ಈ ಬಗ್ಗೆ ಕೇಂದ್ರದ ಜೊತೆಗೆ ಮಾತನಾಡಲಾಗಿದೆ. ಇದರಿಂದ ಸಮುದ್ರ ಭಾಗದ ಜನರಿಗೆ ಅನುಕೂಲವಾಗಲಿದೆ. ಅಸ್ಟ್ರೇಲಿಯಾದ ನುರಿತರ ಜೊತೆ ಮಾತುಕತೆ ನಡೆಸಲಾಗಿದ್ದು ಅಗತ್ಯ ಬಿದ್ದರೇ ಅವರ ಸಹಭಾಗಿತ್ವವನ್ನು ಪಡೆಯಲಾಗುತ್ತದೆ ಎಂದರು.
Comments are closed.