ಕರ್ನಾಟಕ

ಚಲಿಸುತ್ತಿದ್ದ ಬಿಎಂಟಿಸಿ ಬಸ್‍ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ಬಸ್‍ನಿಂದ ಹಾರಿದ ಯುವತಿ

Pinterest LinkedIn Tumblr

ಬೆಂಗಳೂರು: ಬಿಎಂಟಿಸಿ ಬಸ್‍ನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರೋ ಘಟನೆ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯುವತಿ ಫೇಸ್‍ಬುಕ್‍ನಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ದೆಹಲಿಯಲ್ಲಿ ನಡೆದ ನಿರ್ಭಯಾ ಗತಿಯೇ ನನಗೂ ಆಗ್ತಿತ್ತು ಎಂದು ಫೇಸ್‍ಬುಕ್‍ನಲ್ಲಿ ನೊಂದ ಯುವತಿ ಅವಲತ್ತುಕೊಂಡಿದ್ದಾರೆ.

ನಡೆದಿದ್ದೇನು?: ನಾನು 8.10ಕ್ಕೆ ಕೆಲಸ ಮುಗಿಸಿದ ನಂತರ ನನ್ನ ಸಹೋದ್ಯೋಗಿ ರಾಗಿಗುಡ್ಡ ಸ್ಟಾಪ್ ಬಳಿ ನನ್ನ ಡ್ರಾಪ್ ಮಾಡಿದ್ರು. ಜನಜಂಗುಳಿಯಿದ್ದ 500ಸಿ ಬಸ್‍ಗೆ ಹತ್ತಿದೆ. ನಾನು ಉತ್ತರಹಳ್ಳಿಯಲ್ಲಿ ಕೆಳಗಿಳಯಬೇಕಿತ್ತು. ನನಗೆ ಸೀಟ್ ಸಿಕ್ಕಿತು. ಮೊದಲು ಆ ಬಸ್ ಬನಶಂಕರಿ ಡಿಪೋ ಬಳಿ ನಿಲ್ಲಿಸಿತು. ಆಗ ಮಹಿಳೆಯರೆಲ್ಲಾ ಬಸ್‍ನಿಂದ ಕೆಳಗಿಳಿದರು. ನನ್ನ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ಕದಿರೇನಹಳ್ಳಿ ಪೆಟ್ರೋಲ್ ಬಂಕ್ ಸ್ಟಾಪ್‍ನಲ್ಲಿ ಇಳಿಯಬೇಕಿತ್ತು. ಆದರೆ ಈ ವೇಳೆ ಕಂಡಕ್ಟರ್ ವಿಚಿತ್ರವಾಗಿ ವರ್ತಿಸೋಕೆ ಶುರು ಮಾಡಿದ. ಮೊದಲು ಇಲ್ಲೇ ಇಳಿಯಬೇಕು ಅಂತ ಹೇಳಿದ. ಬಳಿಕ ಕೆಟ್ಟದಾಗಿ ನಗುತ್ತಾ 20 ರೂ. ಕೊಡುವಂತೆ ಕೇಳಿದ. ಡ್ರೈವರ್ ತುಂಬಾ ಒರಟಾಗಿ ಮಾತನಾಡಿದ. ಕಂಡಕ್ಟರ್ ಆಕೆಗೆ ಚಿಲ್ಲರೆ ಕೊಡುವ ವೇಳೆ ಮೈ ಕೈ ಮುಟ್ಟಲು ಯತ್ನಿಸಿದ.

ಆಕೆ ಪೆಟ್ರೋಲ್ ಬಂಕ್ ಸ್ಟಾಪ್ ಬಳಿ ಇಳಿದುಕೊಂಡಳು. ನಂತರ ಬಸ್‍ನಲ್ಲಿ ಯಾರಾದ್ರೋ ಮಹಿಳೆಯರು ಇದ್ದಾರಾ ಎಂದು ಹಿಂದೆ ತಿರುಗಿ ನೋಡಿದೆ. 10 ಮಹಿಳೆಯರು ಬಸ್‍ನಲ್ಲಿ ಇದ್ದಿದ್ದನ್ನು ನೋಡಿ ಆರಾಮಾಗಿ ಕುಳಿತುಕೊಂಡೆ. ಸಂಗೀತ ಕೇಳುತ್ತಾ ಕುಳಿತಿದ್ದೆ. ಅನಂತರ ಬಸ್‍ನಲ್ಲಿದ್ದ ನನ್ನನ್ನು ಬಿಟ್ಟು ಬೇರೆ ಯಾವ ಹುಡುಗಿ/ಮಹಿಳೆ ಇರಲಿಲ್ಲ ಎನ್ನುವುದು ಗೊತ್ತಾಯ್ತು. ನನಗೆ ತೊಂದರೆಯಾಗುತ್ತದೆ ಅಂತ ಮನಸ್ಸಿನಲ್ಲಿ ಅನ್ನಿಸುತ್ತಿತ್ತು. ಹೀಗಾಗಿ ಕೂಡಲೇ ಎದ್ದು ನಿಂತು ನನ್ನ 6 ರೂ. ಚಿಲ್ಲರೆ ಕೇಳಲು ಕಂಡಕ್ಟರನ್ನು ಕರದೆ. ಆತ ನಗುತ್ತಾ ನನ್ನ ಬಳಿ ಬಂದು ಲವ್ ಲೆಟರ್ ಕೊಡು ಚಿಲ್ಲರೆ ಕೊಡುತ್ತೇನೆ ಎಂದ. ನಾನು ಸಮಾಧಾನದಿಂದಲೇ ತಮಾಷೆ ಮಾಡುವುದನ್ನು ನಿಲ್ಲಿಸಿ ಎಂದೆ. ಅದಕ್ಕೆ ಆತ ನೀವು ಹುಡುಗಿಯರೆಲ್ಲಾ ಯಾಕೆ ಇಷ್ಟೊಂದು ಒರಟಾಗಿ ನಡೆದುಕೊಳ್ತೀರ ಗೊತ್ತಿಲ್ಲ ಅಂತ ಹೇಳಿದ.

ನಾನು ಒಮ್ಮೆಲೆ ಎದ್ದು ನಿಂತು ಚಿಲ್ಲರೆ ಕೊಡ್ಬೇಡ ನೀನೇ ಇಟ್ಕೋ ಎಂದು ಹೇಳಿ ಬಸ್ ನಿಲ್ಲಿಸುವಂತೆ ಡ್ರೈವರ್‍ಗೆ. ಡ್ರೈವರ್ ನಗುತ್ತಾ, ಸುಮ್ಮನಿರಿ ಮೇಡಂ ನಿಮ್ಮ ಮನೆ ಗೇಟ್ ಹತ್ತಿರ ನಿಲ್ಲಿಸ್ತೀನಿ ಎಂದ. ನಾನು ಕಿರುಚಾಡಿ ತಕ್ಷಣವೇ ಬಸ್ ನಿಲ್ಲಿಸುವಂತೆ ಹೇಳಿದೆ. ಈ ವೇಳೆಗೆ ಹಿಂದೆ ಕುಳಿತಿದ್ದ ನಾಲ್ಕು ಗಂಡಸರು ನನ್ನ ಸೀಟ್ ಬಳಿ ಬಂದು ನಿಂತಿದ್ದರು. ಆಯ್ತು ತಗೋ ನಿನ್ನ 6 ರೂ. ಚಿಲ್ಲರೆ ಅಂತ ಹೇಳಿ ಕಂಡಕ್ಟರ್ ನನ್ನ ಕೈ ಮತ್ತು ಬೆರಳುಗಳನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ. ಚಲಿಸುತ್ತಿರುವ ಬಸ್‍ನಿಂದಲೇ ನಾನು ಕೆಳಗಿಳಿದೆ.

ದೇವರ ದಯದಿಂದ ಆಂಬುಲೆನ್ಸ್ ಬಂತು ಹಾಗೂ ಟ್ರಾಫಿಕ್ ಪೊಲೀಸ್ ಬಸ್‍ನವನನ್ನು ತಡೆದರು. ನಾನು ಓಡಿ ಹೋಗಿ ನಡೆದ ಘಟನೆಯನ್ನು ವಿವರಿಸಿದೆ. ಅವರು ಬಸ್ ನಂಬರ್ ಬರೆದುಕೊಂಡು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ನಾನೀಗ ಸೇಫ್ ಆಗಿ ಇದ್ದೀನಿ. ಇಂತಹ ಘಟನೆಗಳಲ್ಲಿ ನಿಮಗೆ ನೀವೇ ನೆರವಾಗಬೇಕು ಅನ್ನೋದನ್ನು ತಿಳಿಸಲು ಇದನ್ನು ಹೇಳಿದ್ದೇನೆ. ಅವರು ತಮಿಳು, ಕನ್ನಡ ಮಿಶ್ರಿತ ಭಾಷೆಯಲ್ಲಿ ಮಾತನಾಡುತ್ತಿದ್ದರು. ನಿರ್ಭಯಾ ಅನುಭವಿಸಿದ ರೀತಿಯೇ ನನಗೂ ಆಗುತ್ತದೆ ಎಂದು ನನಗೆ ಭಯವಾಗಿತ್ತು ಅಂತ ಯುವತಿ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದ್ದಾರೆ.

ಡ್ರೈವರ್ ಮತ್ತು ಕಂಡಕ್ಟರ್ ಪೊಲೀಸರ ವಶಕ್ಕೆ: ಡ್ರೈವರ್ ರಾಜು ಹಾಗು ಕಂಡಕ್ಟರ್ ಚಂದ್ರಕಾಂತ್ ಎಂಬವರನ್ನ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಬನಶಂಕರಿ ಟೂ ಅತ್ತಿಬೆಲೆ ಮಾರ್ಗವಾಗಿ ಸಂಚರಿಸುವ ಬಿಎಂಟಿಸಿ ಬಸ್ ಇದಾಗಿದ್ದು, ಸುಬ್ರಮಣ್ಯಪುರ ಪೊಲೀಸರು ಆರ್.ಆರ್.ನಗರ ಡಿಪೋದಿಂದ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ. ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಪೊಲೀಸರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

Comments are closed.