ಕರಾವಳಿ

ಕುಂದಾಪುರ (ಬಸ್ರೂರು): ಸ್ಥಳೀಯ ಸಾಂಪ್ರದಾಯಿಕ ಮರಳು ಕಾರ್ಮಿಕರ ಸಂಘ(ರಿ.) ಉದ್ಘಾಟನೆ

Pinterest LinkedIn Tumblr

ಕುಂದಾಪುರ: ಭಾರತವು ಪ್ರಜಾಪ್ರಭುತ್ವ ದೇಶವಾಗಿದ್ದು ಜನರ ಅಹವಾಲುಗಳನ್ನು ಸ್ವೀಕರಿಸಿ ಆ ಸಮಸ್ಯೆಗಳ ಸ್ಪಂದನೆಗಾಗಿ ಜನಪ್ರತಿನಿಧಿಗಳ ಆಯ್ಕೆ ಮಾಡಲಾಗುತ್ತದೆ. ಆದರೇ ಜಿಲ್ಲಾದ್ಯಂತ ಮರಳು ಸಮಸ್ಯೆ ವರ್ಷಗಳಿಂದಲೂ ಬಿಗುಡಾಯಿಸಿದರೂ ಕೂಡ ಗ್ರಾಮಪಂಚಾಯತ್ ಮಟ್ಟದಿಂದ ಜಿಲ್ಲಾಪಂಚಾಯತ್ ಹಾಗೂ ಸರಕಾರ ಮಟ್ಟದವರೆಗೂ ಯಾರೂ ಕೂಡ ಈ ಸಮಸ್ಯೆಯನ್ನು ನೀಗಿಸಲು ಸಾಧ್ಯವಾಗಿಲ್ಲ. ಮರಳು ಅಭಾವದಿಂದ ಎಲ್ಲಾ ಕೆಲಸಗಳು ಸ್ಥಗಿತಗೊಂಡು ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ಈ ಹಿನ್ನೆಲೆ ಇಂತಹ ಸಂಘಟನೆಗಳ ಮೂಲಕ ಜನಪ್ರತಿನಿಧಿಗಳನ್ನು ಎಚ್ಚರಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದು ನ್ಯಾಯವಾದಿ ಶ್ರೀಧರ ಮೊಗವೀರ ಹೇಳಿದರು.

ಬಸ್ರೂರಿನಲ್ಲಿ ನಡೆದ ಸ್ಥಳೀಯ ಸಾಂಪ್ರದಾಯಿಕ ಮರಳು ಕಾರ್ಮಿಕರ ಸಂಘ(ರಿ.) ಬಸ್ರೂರು ಇದರ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.

ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ರಾಮಕಿಶನ್ ಹೆಗ್ಡೆ ಮಾತನಾಡಿ, ಸ್ಥಳೀಯವಾಗಿ ಕಾರ್ಮಿಕ ಸಂಘಟನೆಗಳು ಇಲ್ಲದಿರುವುದು ಹೋರಾಟಕ್ಕೆ ಬಲ ಸಿಗದಿರುವುದಕ್ಕೆ ಮುಖ್ಯ ಕಾರಣ. ಸಂಘಟನೆಯ ಮೂಲಕ ಹೋರಾಟಗಳು ನಡೆದಾಗ ಮಾತ್ರವೇ ಎಲ್ಲಿಯೂ ಕಾರ್ಯಸಾಧಿಸಲು ಸಾಧ್ಯ. ಬಸ್ರೂರು ಭಾಗದಲ್ಲಿ ಹಲವು ವರ್ಷಗಳಿಂದಲೂ ಸಾಂಪ್ರದಾಯಿಕ ಮರಳುಗಾರಿಕೆ ಅಚ್ಚುಕಟ್ಟಾಗಿ ನಡೆಯುತ್ತಿದ್ದು ಈ ಬಾರೀ ಗೊಂದಲದ ವಾತಾವರಣದಿಂದ ಮರಳುಗಾರಿಕೆ ನಿಂತು ಹಲವರು ಕೆಲಸವಿಲ್ಲದೇ ಕಷ್ಟ ಅನುಭವಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಈ ಸಂಘಟನೆಯ ಹೋರಾಟಗಳಲ್ಲಿ ನಾವೆಲ್ಲರೂ ಸಕ್ರೀಯವಾಗಿ ಪಾಲ್ಘೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಧರ್ಮರಾಜ್ ಮುದಲಿಯಾರ್ ಕೆದೂರು ಮಾತನಾಡಿ, ಮರಳುಗಾರಿಕೆ ಸ್ಥಗಿತಗೊಂಡ ಕಾರಣ ತಾಲೂಕಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಕಾರ್ಮಿಕರು ವರ್ಷಗಳಿಂದ ಕೆಲಸವಿಲ್ಲದೇ ಕೂತಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಇಲ್ಲದ ಕಾರಣ ಅಲ್ಲಿ ಟೆಂಡರ್ ಪದ್ದತಿ ಜಾರಿಯಲ್ಲಿದೆ ಆದರೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉತ್ತರ ಕನ್ನಡದಲ್ಲಿ ಈ ಹಿಂದಿನಿಂದಲೂ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುವ ಕಾರಣ ಈ ಮೂರು ಜಿಲ್ಲೆಗಳಿಗೆ ಈ ಮರಳು ನೀತಿ ಅನ್ವಯಾಗುವುದಿಲ್ಲ. ಸಂಬಂದಪಟ್ಟವರು ಈ ಬಗ್ಗೆ ಸೂಕ್ತ ಗಮನಹರಿಸಿ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಬೇಕಾದ ಅನಿವಾರ್ಯತೆಯಿದೆ ಎಂದರು.

ಸ್ಥಳೀಯ ಸಾಂಪ್ರದಾಯಿಕ ಮರಳು ಕಾರ್ಮಿಕರ ಸಂಘ(ರಿ.) ಬಸ್ರೂರು ಇದರ ಅಧ್ಯಕ್ಷ ವಿಕಾಸ್ ಹೆಗ್ಡೆ ಮಾತನಾಡಿ, ನಮ್ಮ ಮರಳನ್ನು ನಮಗೆ ನೀಡದೇ ಹೊರ ಭಾಗಗಳಿಗೆ ಸಾಗಿಸುವ ಪ್ರಯತ್ನ ನಡೆಯುತ್ತಿರುವುದು ಮಾತ್ರವಲ್ಲದೇ ರಾಜಕಾರಣಿಗಳು ನಡೆಸುತ್ತಿರುವ ಎಂ-ಸ್ಯಾಂಡ್ ಎನ್ನುವ ಕಾರ್ಖಾನೆಗಳನ್ನು ಪ್ರಾರಂಭಿಸಿದ್ದು ಮರಳುಗಾರಿಕೆ ಪ್ರಾರಂಭವಾದರೇ ಅವರ ವ್ಯವಹಾರಕ್ಕೆ ಸಮಸ್ಯೆಯಾಗುವ ಭಯದಿಂದ ಸಾಂಪ್ರದಾಯಿಕ ಮರಳುಗಾರಿಕೆ ಆರಂಭವಾಗದಂತೆ ಷಡ್ಯಂತ್ರ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಮರಳುಗಾರಿಕೆ ಅನಿವಾರ್ಯತೆ ಬಗ್ಗೆ ಈಗಾಗಲೇ ಸಂಬಂದಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಅವರು ಈ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ಈ ಸಂಘಟನೆ ಪ್ರಾರಂಭಿಸಿದ್ದು ಇದರ ಮೂಲಕ ಸಂಘಟಿತ ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳುವ ಉದ್ದೇಶ ನಮ್ಮದು ಎಂದರು.

ಈ ಸಂದರ್ಭದಲ್ಲಿ ಬಸ್ರೂರು ಗ್ರಾ. ಪಂ. ಅಧ್ಯಕ್ಷ ಸಂತೋಷ್ ಕುಮಾರ್, ಸದಸ್ಯ ಮಹೇಶ್, ಸ್ಥಳೀಯ ಸಾಂಪ್ರದಾಯಿಕ ಮರಳು ಕಾರ್ಮಿಕರ ಸಂಘ(ರಿ.) ಬಸ್ರೂರು ಇದರ ಗೌರವಾಧ್ಯಕ್ಷ ರಾಮಕೃಷ್ಣ ಪೂಜಾರಿ, ಉದ್ಯಮಿಗಳಾದ ಅಶ್ವಥ್ ಕುಮಾರ್, ಗುಣಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಗ್ರಾ.ಪಂ. ಸದಸ್ಯ ವಿಜಯಧರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.

Comments are closed.