ಕರಾವಳಿ

ಉದ್ಯಮಿ ಉಮೇಶ್ ಶೆಟ್ಟಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು : ನಾಲ್ವರು ಆರೋಪಿಗಳ ಬಂಧನ

Pinterest LinkedIn Tumblr

ಮಂಗಳೂರು,ಜನವರಿ.11: ಮುಲ್ಕಿ ಹಾಗೂ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸರು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ಪ್ರಭಾವತಿ ಟ್ರಾನ್ಸ್ ಪೋರ್ಟ್ ಮಾಲಿಕ ಉಮೇಶ್ ಶೆಟ್ಟಿ (30) ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೊಡೆತ್ತೂರು ನಿವಾಸಿ ಪ್ರಸಾದ್ ಆಚಾರ್ಯ ಪ್ರಾಯ (27), ನಿಡ್ಡೋಡಿಯ ನಿವಾಸಿಗಳಾದ ರಾಜೇಶ ಶೆಟ್ಟಿ (32), ತಿಲಕ್ ಪೂಜಾರಿ ( 26) ಹಾಗೂ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಪ್ರಕಾಶ್ (28) ಎಂದು ಗುರುತಿಸಲಾಗಿದೆ. ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಎಸ್.ಚಂದ್ರಶೇಖರ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಅವರು, ದಿನಾಂಕ 28-12-2016 ರಂದು ಮುಲ್ಕಿ ಠಾಣಾ ವ್ಯಾಪ್ತಿಯಾದ ಕೆಲೆಂಜೂರು ಗ್ರಾಮದ ನಿವಾಸಿ ಹಾಗೂ ಪ್ರಭಾವತಿ ಟ್ರಾನ್ಸ್ ಪೋರ್ಟ್ ಮಾಲಿಕ ಉಮೇಶ್ ಶೆಟ್ಟಿ 30 ಎಂಬಾತನು ಕುಳಾಯಿಯಲ್ಲಿರುವ ಪ್ರಭಾವತಿ ಟ್ರಾನ್ಸ್‌ಪೋರ್ಟ್ ನಲ್ಲಿ ಕೆಲಸ ಮುಗಿಸಿ ಸಂಜೆ ತಾನು ದಿನ ನಿತ್ಯ ಬರುತ್ತಿದ್ದ ಸರ್ವಾಣಿ ಬಸ್ಸಿನಲ್ಲಿ ತನ್ನ ಮನೆಯಾದ ಕೆಲೆಂಜೂರುಗೆ ಹೋಗದೇ ಕಾಣೆಯಾಗಿದ್ದು, ಕಾಣೆಯಾದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಬಗ್ಗೆ ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾಗ ದಿನಾಂಕ 01-01-2017 ರಂದು ಕಲ್ಲಮುಂಡ್ಕೂರು ಗ್ರಾಮ ನಿಡ್ಡೋಡಿ ದಡ್ಡು ಎಂಬಲ್ಲಿ ಉಮೇಶ್ ಶೆಟ್ಟಿ ಮೃತ ದೇಹ ಹಾಡಿ ಪ್ರದೇಶಲ್ಲಿ ಕಂಡು ಬಂದಿದ್ದು, ಈ ಬಗ್ಗೆ ಆತನ ತಮ್ಮ ನಾಗರಾಜ ನೀಡಿದ ದೂರಿನಂತೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಪತ್ತೆಯ ಬಗ್ಗೆ ಪೊಲೀಸ್ ಆಯುಕ್ತರ ನಿರ್ದೇಶನದಂತೆ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ.ಎಸ್ ರವರ ಮಾರ್ಗದರ್ಶನದಲ್ಲಿ ಮುಲ್ಕಿ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಮೂಡಬಿದ್ರೆ ಪೊಲೀಸ್ ಉಪ ನಿರೀಕ್ಷಕ ದೇಜಪ್ಪ ಹಾಗೂ ಸಿಬ್ಬಂದಿಯವರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಸದ್ರಿ ವಿಶೇಷ ತಂಡವು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಆರೋಪಿಗಳನ್ನು ನಿಡ್ಡೋಡಿ ಬಳಿ ದಿನಾಂಕ:10-01-2017 ರಂದು ವಶಕ್ಕೆ ಪಡೆದು ವಿಚಾರಿಸಿದಲ್ಲಿ ಪ್ರಸಾದ್ ಆಚಾರ್ಯ ಎಂಬಾತನು ಉಮೇಶ್ ಶೆಟ್ಟಿಯಿಂದ ಪಡೆದ ಹಣವನ್ನು ಹಿಂದಿರುಗಿಸದೇ ಲಪಟಾಯಿಸುವ ಉದ್ದೇಶದಿಂದ ಕಲ್ಲು ಕೋರೆಯನ್ನು ತೋರಿಸುವ ನೆಪದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಮೇಶ್ ಶೆಟ್ಟಿಯನ್ನು ಪಕ್ಷಿಕೆರೆ ಎಂಬಲ್ಲಿ ದಿನಾಂಕ 28.12.2016 ರಂದು ಸಂಜೆ ಬಸ್ಸಿನಿಂದ ಇಳಿಸಿ ರಿಡ್ಜ್ ಕಾರಿನಲ್ಲಿ ಕರೆದುಕೊಂಡು ಹೋಗಿ ಕುದ್ರಿ ಪದವು ಎಂಬಲ್ಲಿ ರಾಜೇಶ್ ಶೆಟ್ಟಿ, ತಿಲಕ್ ಪೂಜಾರಿ , ಪ್ರಕಾಶ್ ಆಚಾರಿ ರವರೊಂದಿಗೆ ಸೇರಿ ಕೊಲೆ ಮಾಡಿ ಮೃತ ದೇಹವನ್ನು ನಿಡ್ಡೋಡಿ ದಡ್ಡಿಯ ಎತ್ತರ ಕಾಡು ಪ್ರದೇಶದಲ್ಲಿ ಬಿಸಾಡಿರುವುದಾಗಿ ತಿಳಿಸಿದ್ದಾರೆ. ಈ ಪ್ರಕರಣದ ಮುಂದಿನ ತನಿಖೆಯನ್ನು ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ಮೂಡಬಿದ್ರೆ ಪೊಲೀಸ್ ನಿರೀಕ್ಷಕರು ತನಿಖೆಯನ್ನು ಕೈಗೊಂಡಿರುತ್ತಾರೆ ಎಂದವರು ವಿವರಿಸಿದರು.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಸಹಾಯಕ ಉಪ ಪೊಲೀಸ್ ಆಯುಕ್ತರು ಉತ್ತರ ಉಪ ವಿಭಾಗ ರಾಜೇಂದ್ರ.ಡಿ.ಎಸ್ ರವರ ನೇತೃತ್ವದಲ್ಲಿ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ, ಮೂಡಬಿದ್ರೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್, ಪೊಲೀಸ್ ಉಪ ನಿರೀಕ್ಷಕರಾದ ದೇಜಪ್ಪ, ಪ್ರೋಬೇಷನರಿ ಪಿ.ಎಸ್.ಐ ಮಾರುತಿ, ಹೆಡ್ಕಾನ್ಸ್ಟೇಬಲ್ ಚಂದ್ರಶೇಖರ್, ಧರ್ಮೇಂದ್ರ , ಸಿಬ್ಬಂದಿಗಳಾದ ರಾಜೇಶ, ಆಣ್ಣಪ್ಪ, ಸುಧೀರ್, ಬಸವರಾಜ್ , ಅಕಿಲ್, ಸುಜನ್, ಶಿವಕುಮಾರ್ ಎಂಬವರು ಪಾಲ್ಗೊಂಡಿದ್ದರು ಎಂದು ಕಮಿಷನರ್ ತಿಳಿಸಿದರು. ಈ ವೇಳೆ ಡಿಸಿಪಿಗಳಾದ ಕೆ.ಎಮ್.ಶಾಂತರಾಜು, ಡಾ.ಸಂಜೀವ ಎಮ್. ಪಾಟೀಲ್ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಆರೋಪಿಗಳ ಸಂಪೂರ್ಣ ವಿವರ :

ಪ್ರಸಾದ್ ಆಚಾರ್ಯ ಪ್ರಾಯ:27 ವರ್ಷ, ನಡುಗೋಡು ಗ್ರಾಮ, ಕೊಡೆತ್ತೂರು, ಮಂಗಳೂರು ತಾಲೂಕು. ಉದ್ಯೋಗ: ಕ್ರೇನ್ ಅಪರೇಟರ್ ಮತ್ತು ರಿಪೇರಿ ಮಾಡುವುದು. ಎಂ.ಅರ್.ಪಿ.ಎಲ್, ಸುರತ್ಕಲ್ ಹಾಗೂ ಎಂ.ಸಿ.ಎಫ್ ಪಣಂಬೂರು.

ರಾಜೇಶ ಶೆಟ್ಟಿ ಪ್ರಾಯ 32 ವರ್ಷ ನಿಡ್ಡೋಡಿ ಗ್ರಾಮ, ಮಂಗಳೂರು ತಾಲೂಕು ಉದ್ಯೋಗ: ಕ್ರೇನ್ ಅಪರೇಟರ್ ಮತ್ತು ರಿಪೇರಿ ಮಾಡುವುದು. ಎಂ.ಅರ್.ಪಿ.ಎಲ್, ಸುರತ್ಕಲ್ ಹಾಗೂ ಎಂ.ಸಿ.ಎಫ್ ಪಣಂಬೂರು.

ತಿಲಕ್ ಪೂಜಾರಿ ಪ್ರಾಯ 26 ವರ್ಷ ನಿಡ್ಡೋಡಿ ಗ್ರಾಮ, ಮಂಗಳೂರು ತಾಲೂಕು, ಉದ್ಯೋಗ: ಕ್ರೇನ್ ಅಪರೇಟರ್ ಮತ್ತು ರಿಪೇರಿ ಮಾಡುವುದು. ಎಂ.ಅರ್.ಪಿ.ಎಲ್, ಸುರತ್ಕಲ್ ಹಾಗೂ ಎಂ.ಸಿ.ಎಫ್ ಪಣಂಬೂರು.

ಪ್ರಕಾಶ್ ಪ್ರಾಯ: 28ವರ್ಷ ವಾಸ: ಎಸ್.ಗಲ್ ಗ್ರಾಮ, ಮೂಡಿಗೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆ, ಉದ್ಯೋಗ: ಮರದ ಕೆಲಸ, ಮೂಡಿಗೆರೆ ಚಿಕ್ಕಮಗಳೂರು.

Comments are closed.