ಕರಾವಳಿ

ತುಂಬೆ ವೆಂಟೆಡ್ ಡ್ಯಾಮ್ ನೀರು ಏರಿಕೆ ವಿವಾದ : ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರಕ್ಕೆ ಕ್ರಮ

Pinterest LinkedIn Tumblr

ಮಂಗಳೂರು, ಜನವರಿ.5: ತುಂಬೆ ವೆಂಟೆಡ್ ಡ್ಯಾಮ್ನಲ್ಲಿ 7 ಮೀ. ನೀರು ಎತ್ತರಿಸಿದರೆ ಆಸುಪಾಸಿನ ಸುಮಾರು 371 ಎಕರೆ ಜಮೀನು ಮುಳುಗಡೆಯಾಗಲಿದೆ. ಸಂತ್ರಸ್ತ ರೈತ ಕುಟುಂಬಗಳಿಗೆ ಪರಿಹಾರ ನೀಡುವ ಸಲುವಾಗಿ ಜ.8ರಂದು ಸರಕಾರದ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸಮ್ಮುಖ ದಲ್ಲಿ ಸಭೆ ನಡೆಸಲಾಗುವುದು ಎಂದು ಮಂಗಳೂರು ಮೇಯರ್ ಹರಿನಾಥ್ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರಕ್ಕೆ ನಿರಂತರವಾಗಿ ಕುಡಿಯುವ ನೀರು ಪೂರೈಸ ಬೇಕಾದರೆ ತುಂಬೆ ವೆಂಟೆಡ್ ಡ್ಯಾಮ್ನಲ್ಲಿ 7 ಮೀ. ನೀರು ಎತ್ತರಿಸ ಬೇಕಾಗುತ್ತದೆ. ಆದರೆ ಇದರಿಂದ ಆಸುಪಾಸಿನ ಜಮೀನು ಮುಳುಗಡೆಯಾಗುವ ಸಂಭವವಿದೆ. ಈ ರೀತಿ ಮುಳುಗಡೆಯಾಗುವ ಜಮೀನಿನ ಸರ್ವೇ ನಡೆಸಿದ ಬಳಿಕ ಸಂತ್ರಸ್ತ ಕುಟುಂಬ ಗಳಿಗೆ ಶಾಶ್ವತ ಪರಿಹಾರ ನೀಡುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಸರಬ ರಾಜು ಸುಧಾರಣಾ ಯೋಜನೆಯಡಿ ಕಿಂಡಿ ಅಣೆಕಟ್ಟು ನಿರ್ಮಿಸುವ ಬಗ್ಗೆ 2007ರಲ್ಲಿ 40 ಕೋ.ರೂ. ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 2008ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದೀಗ ಭಾಗಶ: ಪೂರ್ಣ ಗೊಂಡಿದೆ. ಅದಕ್ಕೆ ತಗಲುವ 75.50 ಕೋ.ರೂ. ವನ್ನು ರಾಜ್ಯ ಸರಕಾರವೇ ಭರಿಸಿದೆ ಎಂದರು.

ಡ್ಯಾಮ್ ನಿರ್ಮಾಣದಿಂದ ಹಲವು ರೈತರಿಗೆ ಸಮಸ್ಯೆಯಾಗಿದೆ ನಿಜ. ಭೂಮಿ ಮುಳುಗಡೆಯಾಗುವ ಪ್ರದೇಶದ ಎಲ್ಲ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ವಸ್ತುಸ್ಥಿತಿ ಹೀಗಿದ್ದರೂ ರೈತರ ಪರ ಹೋರಾಟ ಮಾಡುವುದಾಗಿ ಯಡಿಯೂರಪ್ಪ ನೀಡಿದ ಹೇಳಿಕೆ ಅಸಂಬದ್ಧ. ವೆಂಟೆಡ್ ಡ್ಯಾಮ್ ನಿರ್ಮಾಣಕ್ಕೆ ಸಂಬಂಧಿಸಿದ 2007ರ ಪ್ರಸ್ತಾವನೆಯಲ್ಲಿ ಅವರು ರೈತರಿಗೆ ಪರಿಹಾರ ನೀಡುವ ಬಗ್ಗೆ ಉಲ್ಲೇಖಿಸಿರಲಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಪ್ರಯತ್ನದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರ ನೀಡಲು ಸೂಚಿಸಿದ್ದಾರೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಕವಿತಾ ಸನಿಲ್, ಲ್ಯಾನ್ಸಿಲಾಟ್ ಪಿಂಟೊ, ಶಶಿಧರ ಹೆಗ್ಡೆ, ಅಪ್ಪಿ, ಬಶೀರ್ ಅಹ್ಮದ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.