ಕರಾವಳಿ

150 ವರ್ಷಗಳ ಇತಿಹಾಸವಿರುವ ಮಂಗಳೂರು ವಿ.ವಿ. ಕಾಲೇಜಿನ ಸಂರಕ್ಷಣೆಗೆ ರೂ.5 ಕೋ ವೆಚ್ಚ : ಸಂಸದ ಮೊಯ್ಲಿ

Pinterest LinkedIn Tumblr

ಮಂಗಳೂರು, ಜನವರಿ.5: ಮಂಗಳೂರು ವಿ.ವಿ. ಕಾಲೇಜಿನ ಕಟ್ಟಡಕ್ಕೆ ಸುಮಾರು 150 ವರ್ಷಗಳ ಇತಿಹಾಸವಿರುವುದರಿಂದ ಇದೀಗ ಈ ಕಟ್ಟಡ್ಡವನ್ನು ಪಾರಂಪರಿಕ ಕಟ್ಟಡವನ್ನಾಗಿ ಸಂರಕ್ಷಿಸಿಕೊಂಡು ಬರಲು 5 ಕೋ. ರೂ. ವೆಚ್ಚ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ವಿಶ್ವ ವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) 1.83 ಕೋ.ರೂ. ಗಳನ್ನು ಮಂಜೂರು ಮಾಡಿದೆ ಎಂದು ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಬುಧವಾರ ಕಾಲೇಜಿಗೆ ಭೇಟಿ ನೀಡಿ ಕಟ್ಟಡದ ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ಈ ಪೈಕಿ ಈಗಾಗಲೇ 91.50 ಲಕ್ಷ ರೂ. ಬಿಡುಗಡೆಯಾಗಿದೆ. ಪ್ರಾರಂಭಿಕ ಹಂತದಲ್ಲಿ 2.50 ಕೋ.ರೂ. ವೆಚ್ಚದಲ್ಲಿ ಕಟ್ಟಡದ ನವೀಕರಣ ಮಾಡುವುದು ಮತ್ತು ಅದನ್ನು ಪಾರಂಪರಿಕ ರೀತಿಯಲ್ಲಿ ಸಂರಕ್ಷಿಸುವ ಬಗ್ಗೆ ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಉಡುಪಿಯ ನಿರ್ಮಿತಿ ಕೇಂದ್ರದ ನಡುವೆ ಒಪ್ಪಂದ ಏರ್ಪಟ್ಟಿದೆ.

ಉಡುಪಿಯ ನಿರ್ಮಿತಿ ಕೇಂದ್ರಕ್ಕೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯಲ್ಲಿ ಅನುಭವ ಇರುವುದರಿಂದ ವಿ.ವಿ. ಕಾಲೇಜು ಕಟ್ಟಡದ ಕಾಮಗಾರಿಯನ್ನು ಈ ಸಂಸ್ಥೆಗೆ ವಹಿಸಲಾಗಿದೆ. ಮಣಿಪಾಲದ ಹರೀಶ್ ಪೈ ಈ ಕಾಮಗಾರಿಯ ಆರ್ಕಿಟೆಕ್ಟ್ ಹಾಗೂ ಕನ್ಸಲ್ಟೆಂಟ್ ಆಗಿರುತ್ತಾರೆ ಎಂದು ತಿಳಿಸಿದರು.

ಮೂಲ ಕಟ್ಟಡಕ್ಕೆ ಹಾನಿಯಾಗದಂತೆ ದುರಸ್ತಿ ಹಾಗೂ ಸಂರಕ್ಷಣೆ ಮಾಡಿ ಯಥಾ ಸ್ಥಿತಿಗೆ ತರುವುದು, ಅಗತ್ಯವಿದ್ದೆಡೆ ಹೊಸ ಮರ ಮಟ್ಟು ಜೋಡಣೆ, ರವೀಂದ್ರ ಭವನದಲ್ಲಿ ಆರ್ಟ್ ಗ್ಯಾಲರಿ ಮತ್ತು ವಾಚನಾಲಯ ನಿರ್ಮಾಣ ಮತ್ತಿತರ ಕಾಮಗಾರಿಗಳು ಇದರಲ್ಲಿ ಒಳಗೊಂಡಿರುತ್ತವೆ ಎಂದು ಅವರು ಹೇಳಿದರು.

ಈ ವೇಳೆ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್, ಮಂಗಳೂರು ವಿ.ವಿ. ರಿಜಿಸ್ಟ್ರಾರ್ ಡಾ. ಲೋಕೇಶ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಶೇಖರ್, ಪಾರಂಪರಿಕ ಕಟ್ಟಡ ಸಂರಕ್ಷಣಾ ಸಮಿತಿಯ ಸಂಯೋಜಕ ಡಾ. ಗಣಪತಿ ಗೌಡ, ಆರ್ಕಿಟೆಕ್ಟ್ ಹರೀಶ್ ಪೈ, ಡಾ. ಜಯವಂತ್ ನಾಯಕ್, ಮನಪಾ ಆಯುಕ್ತ ಮುಹಮದ್ ನಝೀರ್, ತೇಜೋಮಯ, ಕಾರ್ಪೊರೇಟರ್ಗಳಾದ ಭಾಸ್ಕರ್ ಕೆ., ಡಿ.ಕೆ. ಅಶೋಕ್ ಕುಮಾರ್, ಕೆಪಿಸಿಸಿ ಕಾರ್ಮಿಕ ವಿಭಾಗದ ಹಯಾತುಲ್ ಕಾಮಿಲ್ ಮುಂತಾದವರು ಉಪಸ್ಥಿತರಿದ್ದರು.

Comments are closed.