ಕರಾವಳಿ

ಕೊಳವೆಬಾವಿಗೆ ಅನುಮತಿ ನೀಡಲು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ

Pinterest LinkedIn Tumblr

farmer_protest_1

ಮಂಗಳೂರು: ನೀರಿನ ಮೇಲಿನ ಜನರ ಅಧಿಕಾರವನ್ನು ಕಸಿಯುವ ಹಕ್ಕು ಯಾವ ಸರಕಾರಕ್ಕೂ ಇಲ್ಲ. ರಾಜ್ಯದಲ್ಲಿ ಇಷ್ಟು ವರ್ಷ ಪಕ್ಷಗಳು ಆಡಳಿತ ಮಾಡಿದರೂ ಅವಳಿ ಜಿಲ್ಲೆಗೆ ಪೂರಕವಾದ ನೀರಾವರಿ ಯೋಜನೆ ಬಿಡಿ, ಸರ್ವೆ ಕೂಡ ಮಾಡಲಾಗಿಲ್ಲ. ರಾಜಕಾರಣಿಗಳು ತಮಗೆ ಮನ ಬಂದಂತೆ ಆದೇಶ ಹೊರಡಿಸುವ ಬದಲು ಇಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾಧ್ಯಕ್ಷ ರವಿಕಿರಣ್‌ ಪುಣಚ ಆಗ್ರಹಿಸಿದ್ದಾರೆ.

farmer_protest_2 farmer_protest_3

ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆಯ ನೇತೃತ್ವದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಸಾರ್ವಜನಿಕರ ಸಹಯೋಗದೊಂದಿಗೆ ಕೊಳವೆ ಬಾವಿ ಕೊರೆಯುವುದನ್ನು ತಡೆಗಟ್ಟುವ ರಾಜ್ಯ ಸರಕಾರದ ಆದೇಶವನ್ನು ವಿರೋಧಿಸಿ ಮಂಗಳವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

farmer_protest_4 farmer_protest_5

ಈ ಪ್ರದೇಶದ ಭೌಗೋಳಿಕ ವಾತಾವರಣದ ಮಾಹಿತಿ ಅವರಿಗಿಲ್ಲ. ಅವಳಿ ಜಿಲ್ಲೆಗಳಲ್ಲಿ 60 ಸಾವಿರ ಹೆಕ್ಟೇರ್‌ನಷ್ಟು ಅಡಿಕೆಯಿದೆ ಹಾಗೂ 35 ಲಕ್ಷದಷ್ಟು ತೆಂಗಿನ ಮರಗಳಿವೆ. ಸುಮಾರು ಶೇ. 70-75ರಷ್ಟು ರೈತರು ಕೊಳವೆಬಾವಿಯನ್ನು ನಂಬಿಕೊಂಡೇ ನೀರಾವರಿ ನಡೆಯುತ್ತಿದೆ ಎಂದು ಅವರು ಹೇಳಿದರು.

farmer_protest_7 farmer_protest_6

ಸರಕಾರ ಹಾಗೂ ಜಿಲ್ಲಾಡಳಿತದ ನೀತಿಯಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ವಾರದೊಳಗೆ ಸುತ್ತೋಲೆ ಹೊರಡಿಸಿ ಕೊಳವೆಬಾವಿಗೆ ಅನುಮತಿ ನೀಡಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸುರೇಶ್‌ ಭಟ್‌ ಕೊಜಂಬೆ ಆಗ್ರಹಿಸಿದರು.

farmer_protest_8

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ತಾರಾನಾಥ ಗೌಡ ಸುಳ್ಯ, ಜಿಲ್ಲಾ ಸಂಚಾಲಕ ರೂಪೇಶ್‌ ರೈ ಅಲಿಮಾರ್‌, ಜಿಲ್ಲಾ ಸಂಘಟನ ಕಾರ್ಯದರ್ಶಿ ವಿನೋದ್‌ ಪಾದೆಕಲ್ಲು, ಕೋಶಾಧಿಕಾರಿ ಮಂಜುನಾಥ ರೈ ಪರಾರಿ, ಕಾರ್ಯದರ್ಶಿಗಳಾದ ಪ್ರಸಾದ್‌ ಶೆಟ್ಟಿ ಪೆರಾಬೆ, ಇಬ್ರಾಹಿಂ ಖಲೀಲ್‌ ಪುಚ್ಚೆತಡ್ಕ, ರೋನಿ ಮೆಂಡೋನ್ಸಾ ಮೂಡಬಿದಿರೆ, ಸಹಕೋಶಾಧಿಕಾರಿ ಹರ್ಷ ಭಟ್‌ ಪುದುವೆಟ್ಟು, ಪುತ್ತೂರು ತಾ| ಕಾರ್ಯದರ್ಶಿ ರತ್ನ ಕುಮಾರ್‌ ಕೂರ್ಮತಡ್ಕ, ಬೆಳ್ತಂಗಡಿ ತಾ| ಗೌರವಾಧ್ಯಕ್ಷ ನಾರಾಯಣ ರಾವ್‌ ಕೊಲ್ಲಜೆ, ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷರಾದ ಸುಧಾಕರ ಜೈನ್‌, ಗಣೇಶ್‌ ನಾಯಕ್‌ ನೆಕ್ಕಿಲಾಡಿ, ರಮೇಶ್‌ ಗೌಡ ನೆರಿಯ, ಕಾರ್ಯದರ್ಶಿ ಸತ್ಯಶಂಕರ ಭಟ್‌ ಪಿಜಕೋಡಂಗೆ, ಜತೆ ಕಾರ್ಯದರ್ಶಿ ಸೀತಾರಾಮ ಮಡಿವಾಳ, ಬಂಟ್ವಾಳ ತಾಲೂಕು ರೈತ ಮುಖಂಡರಾದ ಪ್ರೇಮನಾಥ ಶೆಟ್ಟಿ, ಸತೀಶ್ಚಂದ್ರ ರೈ ಕಡೇಶ್ವಾಲ್ಯ ಮೊದಲಾದವರು ಪಾಲ್ಗೊಂಡಿದ್ದರು.

Comments are closed.