ಕರ್ನಾಟಕ

ಹುಟ್ಟೂರಿನಲ್ಲಿ ಇಂದು ಮಹದೇವ ಪ್ರಸಾದ್ ಅಂತ್ಯಸಂಸ್ಕಾರ; ಅಂತಿಮ ದರ್ಶನಕ್ಕೆ ವ್ಯವಸ್ಥೆ

Pinterest LinkedIn Tumblr

mahadeva

ಮೈಸೂರು: ಸಚಿವ ಮಹದೇವ ಪ್ರಸಾದ್ ಪಾರ್ಥಿವ ಶರೀರ ಹುಟ್ಟೂರು ಹಾಲಹಳ್ಳಿ ತಲುಪಿದೆ. ಇಂದು ಮಧ್ಯಾಹ್ನದ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅಗಲಿದ ನಾಯಕನಿಗೆ ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.

ರಾಜ್ಯ ರಾಜಕಾರಣದ ಮಿತಭಾಷಿ, ಅಜಾತ ಶತ್ರು ಎಚ್.ಎಸ್.ಮಹದೇವ ಪ್ರಸಾದ್ ಇನ್ನಿಲ್ಲ. ಸದ್ಯ ಪಾರ್ಥಿವ ಶರೀರ ಹುಟ್ಟೂರಾದ ಗುಂಡ್ಲುಪೇಟೆಯ ಹಾಲಹಳ್ಳಿ ತಲುಪಿದೆ. ಇಲ್ಲಿ ಮಧ್ಯಾಹ್ನದ ತನಕ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯಾಹ್ನದ ನಂತರ ಅವರ ತೆಂಗಿನ ತೋಟದಲ್ಲಿ ತಂದೆಯ ಸಮಾಧಿ ಪಕ್ಕದಲ್ಲೇ ವೀರಶೈವ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ. ಇದಕ್ಕಾಗಿ ಚಾಮರಾಜನಗರ ಜಿಲ್ಲಾಡಳಿತ ಕೂಡ ಸಕಲ ಸಿದ್ಧತೆ ಕೂಡ ಮಾಡಿಕೊಂಡಿದೆ.

ಮಹದೇವ್ ಪ್ರಸಾದ್ ಪತ್ನಿ ಗೀತಾ ಹಾಗೂ ಮಗ ಗಣೇಶ್ ಪ್ರಸಾದ್ ಹಾಗೂ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನು ನಿನ್ನೆ ಸಂಜೆ ಮೈಸೂರಿನ ಕುವೆಂಪುನಗರದ ನಿವಾಸಕ್ಕೆ ಪಾರ್ಥಿವ ಶರೀರವನ್ನು ತರಲಾಗಿದ್ದು, ಕೆಲ ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಇಲ್ಲಿ ಸಿಎಂ ಸಿದ್ರಾಮಯ್ಯ ಆಪ್ತನನ್ನು ನೆನೆದು ಗದ್ಗದಿತರಾದರು.

ಈ ವೇಳೆ ಸುತ್ತೂರು ಶ್ರೀಗಳು, ಮಾಜಿ ಪ್ರಧಾನಿ ದೇವೇಗೌಡ, ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಸಿ. ಮಹದೇವಪ್ಪ, ಸೇರಿದಂತೆ ರಾಜಕೀಯ ಗಣ್ಯರು ಕಾರ್ಯಕರ್ತರು ಅಂತಿಮ ದರ್ಶನ ಪಡೆದರು. ಆಮೇಲೆ ರಾತ್ರಿ ವೇಳೆಗೆ ಗುಂಡ್ಲುಪೇಟೆ ಮೂಲಕ ಹುಟ್ಟೂರು ಹಾಲಹಳ್ಳಿಗೆ ಪಾರ್ಥಿವ ಶರೀರ ತರಲಾಗಿದೆ. ನಿನ್ನೆ ಬೆಳಗ್ಗೆ ಚಿಕ್ಕಮಗಳೂರು ಸೆರಾಯ್ ರೆಸಾರ್ಟ್’ನಲ್ಲಿ ಹೃದಯಾಘಾತದಿಂದ ಮಹದೇವ ಪ್ರಸಾದ್ ಸಾವಿಗೀಡಾಗಿದ್ದರು.

Comments are closed.