ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಾಕಲು ನಮಗೂ ಗೊತ್ತಿದೆ : ಸಂಸದ ನಳಿನ್ ಕುಮಾರ್ ಹೇಳಿಕೆಗೆ ಡಿವೈಎಫ್‌ಐ ಖಂಡನೆ

Pinterest LinkedIn Tumblr

nalin_kumar-kateel

ಮಂಗಳೂರು: ಕೊಣಾಜೆಯಲ್ಲಿ ಇತ್ತೀಚೆಗೆ ನಡೆದ ಕಾರ್ತಿಕ್‌ರಾಜ್ ಕೊಲೆ ಪ್ರಕರಣದ ಆರೋಪಿಗಳನ್ನು 10 ದಿನಗಳ ಒಳಗೆ ಬಂಧಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಾಕಲು ನಮಗೂ ಗೊತ್ತಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರತಿಭಟನಾ ಭಾಷಣದಲ್ಲಿ ಹೇಳಿರುವ ಹೇಳಿಕೆ ಇದೀಗ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.

ಇತ್ತೀಚೆಗೆ ನಡೆದ ಪಜೀರ್‌‌ನ ಕಾರ್ತಿಕ್‌ರಾಜ್ ಹತ್ಯೆ ಆರೋಪಿಗಳ ಪತ್ತೆಗೆ ಆಗ್ರಹಿಸಿ ಕೊಣಾಜೆ ಪೊಲೀಸ್ ಠಾಣೆಯ ಮುಂಭಾಗದಲ್ಲೇ ನಡೆದ ಪ್ರತಿಭಟನಾ ಧರಣಿ ಉದ್ದೇಶಿಸಿ ಭಾವಧ್ವೇಗದಿಂದ ಮಾತನಾಡಿದ ಅವರು ಈ ಮೇಲಿನ ಹೇಳಿಕೆ ನೀಡಿದ್ದರು. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ತಿಕ್‌ರಾಜ್ ಹತ್ಯೆ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಹಲವು ದುಷ್ಕೃತ್ಯಗಳು ನಡೆಯುತ್ತಿವೆ. ಆದರೆ ಈ ಪ್ರಕರಣಗಳಿಗೆ ಸಂಬಂಧಿಸಿ ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸರು ಹಾಗೂ ಸರ್ಕಾರ ವಿಫಲವಾಗಿದೆ. ಈ ಎಲ್ಲಾ ಕ್ರಿಮಿನಲ್ ಚಟುವಟಿಕೆಗಳಿಗೆ ಈ ಭಾಗದ ಶಾಸಕರೇ ನೇರ ಹೊಣೆ ಎಂದು ಅವರು ಆರೋಪಿಸಿದ್ದರು.

ಆದರೆ ಕೊಣಾಜೆ ಪೊಲೀಸ್ ಠಾಣೆ ಎದುರು ಭಾನುವಾರ ನಡೆದ ಪ್ರತಿಭಟನೆಯಲ್ಲಿ ಕಾರ್ತಿಕ್ ರಾಜ್ ಹಂತಕರನ್ನು ಹತ್ತು ದಿವಸಗಳಲ್ಲಿ ಬಂಧಿಸದಿದ್ದಲ್ಲಿ ಜಿಲ್ಲೆಗೆ ಬೆಂಕಿ ಇಡಲೂ ಸಿದ್ಧರಿದ್ದೇವೆ ಎಂಬ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಬಹಿರಂಗ ಹೇಳಿಕೆಗೆ ಡಿವೈಎಫ್‌ಐ ಉಳ್ಳಾಲ ವಲಯ ಖಂಡನೆ ವ್ಯಕ್ತಪಡಿಸುತ್ತಿದೆ ಎಂದು ಡಿವೈಎಫ್‌ಐ ಕಾರ್ಯದರ್ಶಿ ಜೀವನ್‌ರಾಜ್ ಕುತ್ತಾರು ಆರೋಪಿಸಿದ್ದಾರೆ.

ಕೊಣಾಜೆಯಲ್ಲಿ ನಡೆದ ಕಾರ್ತಿಕ್ ರಾಜ್ ಕೊಲೆಯ ಹಂತಕರನ್ನು ಬಂಧಿಸಲು ಉನ್ನತ ಮಟ್ಟದ ವಿಶೇಷ ತಂಡವನ್ನು ರಚಿಸುವಂತೆ ಡಿವೈಎಫ್‌ಐ ಪೊಲೀಸ್ ಇಲಾಖೆಗೆ ಆಗ್ರಹಿಸಿತ್ತು. ಆದರೆ ಇದರ ಬಗ್ಗೆ ಇಲಾಖೆ ಗಮನಹರಿಸದೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ದಯನೀಯ ವೈಫಲ್ಯ ಕಂಡಿತ್ತು. ಈ ವೈಫಲ್ಯದ ವಿರುದ್ಧ ಧ್ವನಿ ಎತ್ತಬೇಕಾಗಿದ್ದ ಬಿಜೆಪಿಯು ಅಮಾಯಕನೊಬ್ಬನ ಕೊಲೆ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ತನ್ನ ಮತೀಯ ಅಜೆಂಡಾವನ್ನು ಪ್ರಕರಣದಲ್ಲಿ ತುರುಕಿ ಕೋಮು ವಿಭಜನೆಗೆ ಪ್ರಯತ್ನಿಸುತ್ತಿದೆ ಎಂದು ಜೀವನ್‌ರಾಜ್ ಕುತ್ತಾರು ಆರೋಪ ಮಾಡಿದ್ದಾರೆ.

ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂದು ಸಂಸದ ನಳಿನ್ ಅವರು ಬಹಿರಂಗವಾಗಿ ಹೇಳಿರುವುದು ಜನತೆಯನ್ನು ಆತಂಕಕ್ಕೀಡು ಮಾಡಿದೆ. ಪೊಲೀಸ್ ಇಲಾಖೆಯು ಸಂಸದರ ಈ ಹೇಳಿಕೆಯ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಬೇಕು. ಹಾಗೂ ಕಾರ್ತಿಕ್ ರಾಜ್ ಹಂತಕರನ್ನು ಪತ್ತೆ ಹಚ್ಚಲು ಉನ್ನತ ಮಟ್ಟದ ವಿಶೇಷ ತಂಡ ರಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Comments are closed.