ಮೂಡುಬಿದಿರೆ,ಜನವರಿ.1: ಕಿನ್ನಿಗೋಳಿ ಮೂಲದ ಉದ್ಯಮಿಯೊಬ್ಬರು ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇದೀಗ ಅವರ ಶವವು ಮೂಡುಬಿದಿರೆ ಸಮೀಪದ ನಿಡ್ಡೋಡಿ ಗುಡ್ಡ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ.
ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಂಬಳಿಮನೆ ನಿವಾಸಿ ರಾಮಕೃಷ್ಣ ಶೆಟ್ಟಿ- ಪ್ರಭಾವತಿ ಶೆಟ್ಟಿ ದಂಪತಿಯ ಪುತ್ರ ಉಮೇಶ್ ಶೆಟ್ಟಿ(29) ಡಿ.28ರಂದು ನಾಪತ್ತೆಯಾಗಿದ್ದರು. ಮುಲ್ಕಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಟ್ರಾನ್ಸ್ಫೋರ್ಟ್ ಉದ್ಯಮದಲ್ಲಿ ಪಾಲುದಾರರಾಗಿದ್ದ ಉಮೇಶ್ ಶೆಟ್ಟಿ, ಉದ್ಯಮದ ನಿಮಿತ್ತ ಪ್ರತಿದಿನ ಪಣಂಬೂರಿಗೆ ಹೋಗಿ ಬರುತ್ತಿದ್ದರು. ಡಿ.28ರಂದು ಪಕ್ಷಿಕೆರೆ ಬಳಿ ಬಸ್ಸಿನಿಂದ ಇಳಿದಿದ್ದು ಬಳಿಕ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಹೋಗಿರುವುದಾಗಿ ತಿಳಿದುಬಂದಿದೆ. ಆದರೆ ಬಳಿಕ ಮನೆಗೆ ಬಾರದೇ ಇರುವುದರಿಂದ ಕುಟುಂಬದ ಸದಸ್ಯರು ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಗಲ್ಪ್ ರಾಷ್ಟ್ರದಿಂದ ಕ್ರೈಸ್ತ ಕುಟುಂಬವೊಂದು ನಿಡ್ಡೋಡಿಯಲ್ಲಿ ಜಾಗವನ್ನು ಖರೀದಿಸಿದ್ದು ಕ್ರಿಸ್ಮಸ್ ರಜೆಗಾಗಿ ಊರಿಗೆ ಬಂದಿದ್ದರು. ಡಿಸೆಂಬರ್ 30 ರಂದು ಜಾಗ ವೀಕ್ಷಣೆಗೆಂದು ಬಂದಿದ್ದಾಗ ಉಮೇಶ್ ಶೆಟ್ಟಿ ಅವರ ಮತದಾರರ ಗುರುತು ಚೀಟಿ ಹಾಗೂ ಪರ್ಸ್ ಸಿಕ್ಕಿತ್ತು. ಫೇಸ್ಬುಕ್ನಲ್ಲಿ ಉಮೇಶ್ ಶೆಟ್ಟಿ ಅವರ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.
ಕಟೀಲು ಅಜಾರು ಸಮೀಪದ ವ್ಯಕ್ತಿಯೋರ್ವರಿಗೆ ಕಿಲೆಂಜೂರಿನಲ್ಲಿ ಈ ಬಗ್ಗೆ ವಿಚಾರಿಸಿ ತಿಳಿಸಿ ಎಂದು ಪರ್ಸ್ ಹಾಗೂ ಗುರುತು ಚೀಟಿ ನೀಡಿ ಗಲ್ಪ್ ರಾಷ್ಟ್ರಕ್ಕೆ ಹಿಂದಿರುಗಿದ್ದರು. ಭಾನುವಾರ ನಿಡ್ಡೋಡಿ ಪರಿಸರದಲ್ಲಿ ಪರಿಶೀಲನೆ ಮಾಡುವಾಗ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಮುಖ್ಯ ರಸ್ತೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದ ಗುಡ್ಡ ಪ್ರದೇಶದಲ್ಲಿ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಎಸಿಪಿ ರಾಜೇಂದ್ರ, ಡಿಸಿಪಿ ಕಾಂತರಾಜು, ಮುಲ್ಕಿ ಠಾಣಾಧಿಕಾರಿ ಅನಂತ ಪದ್ಮನಾಭ ಮೂಡಬಿದಿರೆ ಠಾಣಾಧಿಕಾರಿ ರಾಮಚಂದ್ರ ನಾಯಕ್, ಶ್ವಾನದಳ, ಬೆರಳಚ್ಚು ಹಾಗೂ ಪೊರೆನಿಕ್ಸ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಉನ್ನತ ತನಿಖೆ ನಡೆಸುತ್ತಿದ್ದಾರೆ.
Comments are closed.