ಕರಾವಳಿ

ಉಳ್ಳಾಲ : ಹೊಸ ವರ್ಷಾಚರಣೆ – ಗುಂಡಿನ ಮತ್ತಿನಲ್ಲಿ ಸ್ನೇಹಿತನ ಹತ್ಯೆ.

Pinterest LinkedIn Tumblr

murder_ullala_friends

ಮಂಗಳೂರು, ಜನವರಿ.1: ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದ ಯುವಕರಿಬ್ಬರ ನಡುವೆ ಹೊಸ ವರ್ಷದ ಪಾರ್ಟಿಯಲ್ಲಿ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯವಾದ ಘಟನೆಯೊಂದು ಕುತ್ತಾರು ಜಂಕ್ಷನ್ ಬಳಿ ಶನಿವಾರ ತಡರಾತ್ರಿ ನಡೆದಿದೆ.

ಸೆಲೂನಿನಲ್ಲಿ ಜತೆಯಾಗಿಯೇ ಕೆಲಸ ನಿರ್ವಹಿಸುತ್ತಿದ್ದ ಶಿಕಾರಿಪುರದ ಪ್ರದೀಪ್ ಎಂಬಾತ ತನ್ನ ಸ್ನೇಹಿತನಾದ ದಾವಣಗೆರೆಯ ಹರಳಹಳ್ಳಿ ನಿವಾಸಿ ರುದ್ರಮಣಿ ಸಂತೋಷ್ (26) ಎಂಬಾತನನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿದ್ದಾನೆ ಎನ್ನಲಾಗಿದೆ.

ಕುತ್ತಾರ್ ಜಂಕ್ಷನ್‌ನಲ್ಲಿ ಸೆಲೂನ್ ನಡೆಸುತ್ತಿರು ದಾವಣಗೆರೆ ಮೂಲದ ರುದ್ರಮಣಿ ಮತ್ತು ಈತನ ಸ್ನೇಹಿತ ಹಾಗೂ ರೂಮ್ ಮೇಟ್ ಆಗಿರುವ ಶಿಕಾರಿಪುರದ ಪ್ರದೀಪ್ ಮಧ್ಯೆ ಹೊಸ ವರ್ಷದ ಪಾರ್ಟಿ ಸಂದರ್ಭ ಮಾತಿಗೆ ಮಾತು ಬೆಳೆದು ಕ್ಷುಲಕ್ಕ ಕಾರಣಕ್ಕಾಗಿ ನಡೆದ ವಾದವಿವಾದ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿದೆ.

ಘಟನೆ ವಿವರ :

ಕುತ್ತಾರು ಸಂಗಾತಿ ಕಾಂಪ್ಲೆಕ್ಸ್ ನಲ್ಲಿರುವ ರಮೇಶ್ ಎಂಬವರಿಗೆ ಸೇರಿದ ಸೆಲೂನಿನಲ್ಲಿ ಅವರ ಸಂಬಂಧಿ ಸಂತೋಷ್ ಮತ್ತು ಪ್ರದೀಪ್ ಜತೆಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಶನಿವಾರ ತಡರಾತ್ರಿ ಕೆಲಸ ಮುಗಿಸಿದ್ದ ಬಳಿಕ ಇಬ್ಬರೂ ಜತೆಯಾಗಿಯೇ ಹೊರಗೆ ತೆರಳಿದ್ದರು. ಅಲ್ಲಿಂದ ಹೊಸವರ್ಷದ ಪಾರ್ಟಿ ಆಚರಿಸಲು ಅಂಗಡಿ ಮೇಲಿರುವ ಬಾಡಿಗೆ ರೂಮಿಗೆ ಮದ್ಯ ತಂದಿದ್ದರು.

ಕಿಕ್ ಏರಿಸುತ್ತಿದ್ದಂತೆ ಪ್ರದೀಪ್ ಓರ್ವ ಮಹಿಳೆ ಜತೆಗೆ ಮಾತನಾಡುವುದನ್ನು ಸಂತೋಷ ಆಕ್ಷೇಪ ಎತ್ತಿದ್ದನು. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಸಂತೋಷ , ಪ್ರದೀಪನ ತಾಯಿಗೆ ಬೈದಿದ್ದನು. ಅಷ್ಟರಲ್ಲಿ ರೊಚ್ಚಿಗೆದ್ದ ಪ್ರದೀಪ ಅಡುಗೆ ಕೋಣೆಯಲ್ಲಿದ್ದ ಚೂರಿಯನ್ನು ಹಿಡಿದು ಸಂತೋಷ್ ನ ಹೃದಯಭಾಗಕ್ಕೆ ತಿವಿದಿದ್ದಾನೆ.

ವಿಪರೀತ ರಕ್ತಸ್ರಾವ ಉಂಟಾಗಿ ಬೊಬ್ಬೆ ಹಾಕಿದಾಗ ಸೆಲೂನಿನ ಮಾಲೀಕ ರಮೇಶ್ ಮತ್ತು ನೆರೆಯ ಮನೆಯ ರೋಷನ್ ಎಂಬವರು ಧಾವಿಸಿ ದೇರಳಕಟ್ಟೆ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಸಂತೋಷ್ ಕೊನೆಯುಸಿರೆಳೆದಿದ್ದ ಎಂದು ತಿಳಿದು ಬಂದಿದೆ..

ಸಂತೋಷ್ ನನ್ನು ಆಸ್ಪತ್ರೆಗೆ ಸೇರಿಸಲು ಪ್ರದೀಪ್ ಕೂಡಾ ನೆರವಾಗಿದ್ದು, ಬಳಿಕ ಉಳ್ಳಾಲ ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆಗೀಡಾದ ಸಂತೋಷ್ ಸಹೋದರಿ ವಿವಾಹ ಫೆ.15 ರಂದು ನಡೆಯುವುದರಲ್ಲಿತ್ತು, ಮಾರ್ಚ್ ತಿಂಗಳಲ್ಲಿ ಸಂತೋಷನಿಗೂ ವಿವಾಹ ನಿಗದಿಯಾಗಿತ್ತು .

Comments are closed.