ಮಂಗಳೂರು: ಎತ್ತಿನಹೊಳೆ ಯೋಜನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಡಿ.೨೬ರಂದು ನಡೆದ ಸಭೆ ದ.ಕ ಜಿಲ್ಲೆಗೆ ಮಾಡಿದ ಅವಮಾನ ಎಂದು ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ಆರೋಪಿಸಿದೆ
ಬುಧವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಸಮಿತಿ ಸಂಚಾಲಕ ಕೆ.ವಿಜಯ ಕುಮಾರ್ ಶೆಟ್ಟಿ ಅವರು, ಸಭೆಯಲ್ಲಿ ಯೋಜನೆಯ ಕುರಿತಾಗಿ ಚರ್ಚೆ ನಡೆಯಲಿಲ್ಲ ಜಿಲ್ಲೆಗೆ ಅಗುವ ಹಾನಿಯ ಬಗ್ಗೆ ಯಾರೂ ವಿಚಾರಿಸಲಿಲ್ಲ ಬದಲಾಗಿ ಭಾಗವಹಿಸಿದ ಹೋರಾಟಗಾರರನ್ನು ಬಾಯಿ ಮುಚ್ಚಿಸುವ ಕೆಲಸ ನಡೆಯಿತು ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ನಮ್ಮನ್ನು ಪರಕೀಯರಂತೆ ಕಂಡರು. ರೈ ಅವರಿಂದ ಏಕವಚನದಲ್ಲಿ ನಿಂದಿಸುವಷ್ಟು ಕೀಳುಮಟ್ಟದ ರಾಜಕಾರಣ ನಡೆಯುತ್ತಿದೆ. ಎತ್ತಿನಹೊಳೆ ಯೋಜನೆ ಬಗ್ಗೆ ಸಿಎಂ ಸಮ್ಮಖದಲ್ಲಿ ನಡೆದ ಸಭೆಯು ಇಸ್ಪೀಟು ಕ್ಲಬ್ ನಡೆಸುವ ರೀತಿಯಲ್ಲಿ ನಡೆಸಲಾಗಿದೆ. ಮುಖ್ಯಮಂತ್ರಿಗಳು ನಮ್ಮನ್ನು ಮಂಕು ಮಾಡುವ ರೀತಿಯಲ್ಲಿ ವ್ಯವಸ್ಥಿತವಾಗಿ ಸಭೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದ.ಕ. ಜಿಲ್ಲಾ ಉಸ್ತವಾರಿ ಸಚಿವ ಬಿ.ರಮಾನಾಥ ರೈ ಅವರು ಬಾಲ ಬಿಚ್ಚಿದರೆ ಅವರ ಅನೇಕ ಸಂಗತಿಗಳನ್ನು ಬಯಲು ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ವಿಜಯಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದರು. ರಮಾನಾಥ್ ರೈ ಯವರೇ ನನ್ನ ಪಕ್ಷ ಕೂಡ ಕಾಂಗ್ರೇಸ್ ಹಾಗಂತ ನನಗೆ ಯಾರ ಹೆದರಿಕೆಯೂ ಇಲ್ಲ ನಾನು ಹೆದರುವುದು ಎಐಸಿಸಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು ಮತ್ತು ದೇವರಿಗೆ ಮಾತ್ರ. ನಿಮ್ಮ ಕೆಲವೊಂದು ಜಾತಕ ನನ್ನ ಬಳಿ ಇದೆ, ಸಂಧರ್ಭ ಬಂದಾಗ ಅದನ್ನು ಸಾರ್ವಜನಿಕರ ಮುಂದೆ ಇಡುತ್ತೇನೆ ಎಂದು ವಿಜಯ ಕುಮಾರ್ ಶೆಟ್ಟಿ ಆಕ್ರೋಷ ವ್ಯಕ್ತಪಡಿಸಿದರು. ನಿಮ್ಮ ಬಗೆಗಿನ ದೊಡ್ಡದಾದ ಪಟ್ಟಿ ಇದೆ. ಮುಂದೆ ಬಾಲ ಬಿಚ್ಚಿದಿರಾದರೆ ನಾನು ಸುಮ್ಮನಿರಲಾರೆ ಪಟ್ಟಿ ಹೊರಗಡೆಹುತ್ತೇನೆ ಎಂದು ಎಚ್ಚರಿಸಿದರು.
ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ದಕ್ಷಿಣ ಕನ್ನಡದ ಜನತೆ ನಾಚಿಕೆ ಪಡುವ ರೀತಿಯಲ್ಲಿ ಸಭೆಯಲ್ಲಿ ನಡವಳಿಕೆ ಪ್ರದರ್ಶಿಸಿದ್ದಾರೆ. ಜಿಲ್ಲೆಗೆ ಏನಾದರೂ ಪರಿಹಾರ ಸಿಗಬಹುದು ಎಂಬ ನಮ್ಮ ನಿರೀಕ್ಷೆ ಹುಸಿಯಾಯಿತು. ಜಿಲ್ಲೆಯ ಜನತೆಯ ಹಿತ ಮರೆತ ಇಲ್ಲಿಯ ಸಚಿವರು ಮತ್ತು ಶಾಸಕರಿಗೆ ಜನತೆ ಸರಿಯಾದ ಪಾಠ ಕಲಿಸಬೇಕು ಎಂದು ವಿಜಯ ಕುಮಾರ್ ವಿನಂತಿಸಿದರು.
ಹೋರಾಟ ಸಮಿತಿಯ ಪ್ರಮುಖರಾದ ಪುರುಷೋತ್ತಮ ಚಿತ್ರಾಪುರ, ಎಂ.ಜಿ.ಹೆಗ್ಡೆ, ಶಶಿರಾಜ್ ಕೊಳಂಬೆ, ದಿನೇಶ್ ಹೊಳ್ಳ, ದಿನಕರ್ ಶೆಟ್ಟಿ, ಪ್ರಶಾಂತ್ ಕಡಬ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.