ಮಂಗಳೂರು,ಡಿಸೆಂಬರ್.27 :ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಿರುದ್ಧ ಅತ್ಯಂತ ವ್ಯವಸ್ಥಿತವಾಗಿ ಸುಳ್ಳು ಸುದ್ದಿ ಹರಡಲಾಗಿದ್ದು, ಸುಳ್ಳು ಸುದ್ದಿ ಹಬ್ಬಿದ ಮಾಧ್ಯಮದ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಇತ್ತೀಚಿಗೆ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ಕರೆದ ಪತ್ರಿಕಗೋಷ್ಠಿಯಲ್ಲಿ ಹೇಳಿಕೆ ನೀಡುವ ಮೂಲಕ ಸುದ್ಧಿಯಾಗಿದ್ದ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ನ ಪ್ರಧಾನ ಕಚೇರಿಗೆ ಮಂಗಳವಾರ ಐಟಿ ಮತ್ತು ಇಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರ 500- 1000 ನೋಟು ನಿಷೇಧ ಮಾಡಿದ ನಂತರ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿ ಡಿ ಸಿ ಸಿ) ನಲ್ಲಿ ಕೋಟ್ಯಾಂತರ ಹಣ ಅಸಹಜವಾಗಿ ಜಮೆಯಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಐಟಿ ಮತ್ತು ಇಡಿ ಅಧಿಕಾರಿಗಳು ಬ್ಯಾಂಕಿಗೆ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಗೆ ಆಗಮಿಸಿರುವ ಐಟಿ ಮತ್ತು ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸುಮಾರು ಎರಡು ಗಂಟೆಗಳಿಂದ ಬ್ಯಾಂಕ್ ವ್ಯವಹಾರ ಸ್ಥಗಿತಗೊಂಡಿದ್ದು ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ನಂತರದ ಐದು ದಿನಗಳಲ್ಲಿ ಕೋಟ್ಯಾಂತರ ಹಣ ಎಸ್ ಸಿಡಿಸಿಸಿ ಬ್ಯಾಂಕಿನ ಅಧೀನದಲ್ಲಿರುವ ಸಹಕಾರಿ ಬ್ಯಾಂಕುಗಳಲ್ಲಿ ಸಂಗ್ರಹವಾಗಿತ್ತು. ಈ ಬಗ್ಗೆ ಈಗಾಗಲೇ ಐಟಿ ಮತ್ತು ಇಡಿ ಅಧಿಕಾರಿಗಳು ಎಸ್ಡಿಸಿಸಿ ಬ್ಯಾಂಕಿನಲ್ಲಿ ಮಾಹಿತಿಯನ್ನು ಕೇಳಿದ್ದರು ಎನ್ನಲಾಗಿದೆ.
ಇದೀಗ ಆದಾಯ ತೆರಿಗೆ ಅಧಿಕಾರಿಗಳು ಪ್ರಧಾನ ಕಚೇರಿಗೆ ಆಗಮಿಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ನೋಟ್ ಬ್ಯಾನ್ ನಂತರ ಸುಮಾರು ನೂರಕ್ಕೂ ಮಿಕ್ಕಿ ಸಂಖ್ಯೆ ರಹಿತ ಖಾತೆಗೆ ಹಣ ಜಮಾವಣೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಐಟಿ ಮತ್ತು ಇಡಿ ಅಧಿಕಾರಿಗಳು ಬ್ಯಾಂಕಿಗೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬ್ಯಾಂಕಿನ ವಿರುದ್ಧ ಸುಳ್ಳು ಸುದ್ದಿ ಹಬ್ಬಿದ ಮಾಧ್ಯಮದ ವಿರುದ್ಧ ಮಾನನಷ್ಟ ಮೊಕದ್ದಮೆ: ಎಂಎನ್ಆರ್
ಮಂಗಳೂರು: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಿರುದ್ಧ ಅತ್ಯಂತ ವ್ಯವಸ್ಥಿತವಾಗಿ ಸುಳ್ಳು ಸುದ್ದಿ ಹಬ್ಬಿದ ಮಾಧ್ಯಮದ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಇತ್ತೀಚಿಗೆ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ಕರೆದ ಪತ್ರಿಕಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.
ಮಾಧ್ಯಮವೊಂದು ಬ್ಯಾಂಕ್ನ ವಿರುದ್ಧ ಉದ್ದೇಶಪೂರಿತವಾಗಿ ಸುಳ್ಳು ಸುದ್ದಿ ಪ್ರಸಾರ ಮಾಡಿದೆ. ಇದಕ್ಕೆ ದಾಖಲೆಯಿದ್ದರೆ ಬಿಡುಗಡೆ ಮಾಡಲಿ. ವಿಚಾರಣೆ ಎದುರಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದರು.
ಎಸ್ ಸಿಡಿಸಿಸಿ ಬ್ಯಾಂಕ್ 101 ಶಾಖೆಗಳ ಮೂಲಕ ಕಾರ್ಯಾಚರಿಸುತ್ತಿವೆ. ಆರ್ಬಿಐ ಆದೇಶದ ಬಳಿಕ ನ.10ರಿಂದ 14ರವರೆಗೆ 101 ಶಾಖೆಗಳಲ್ಲದೆ 167 ಪ್ರಾಥಮಿಕ ಪತ್ತಿನ ಸಹಕಾರಿ ಸಂಘ ಮತ್ತು ಅವುಗಳ 244 ಶಾಖೆಗಳಿಂದ ಹಾಗೂ ಒಟ್ಟಾರೆ 1,166 ಸಹಕಾರ ಸಂಘಗಳಿಂದ 386.65 ಕೋ.ರೂ. ಠೇವಣಿ ಮತ್ತು ಸಾಲದ ಖಾತೆಗೆ ಜಮೆಯಾಗಿದೆ ಎಂದು ಅವರು ತಿಳಿಸಿದ್ದರು.