ಕರಾವಳಿ

ಬಾಳಿಗ ಹತ್ಯೆ ಪ್ರಕರಣ :ನ್ಯಾಯಾಲಯಕ್ಕೆ 325 ಪುಟಗಳ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಕೆ

Pinterest LinkedIn Tumblr

Baliga_Protest_Meravang_2

ಮಂಗಳೂರು, ಡಿ. 27: ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಗರದ ಮೂರನೇ ಪ್ರಥಮ ದರ್ಜೆ ನ್ಯಾಯಾಲಯಕ್ಕೆ 325 ಪುಟಗಳ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಪ್ರಕರಣದ ತನಿಖಾಧಿಕಾರಿಯಾಗಿರುವ ಎಸಿಪಿ ಉದಯ ನಾಯಕ್ ಅವರು ಡಿ.17ರಂದು ಮೂರನೇ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. 325 ಪುಟಗಳ ಈ ಆರೋಪ ಪಟ್ಟಿಯಲ್ಲಿ 130 ಸಾಕ್ಷಿಗಳನ್ನು ವಿಚಾರಿಸಿರುವ ಕುರಿತು ವಿವರಿಸಲಾಗಿದೆ.ಹಿಂದಿನ ತನಿಖಾಧಿಕಾರಿಯಾಗಿದ್ದ ಎಸಿಪಿ ತಿಲಕ್ಚಂದ್ರ ಅವರು ಈ ಹಿಂದೆ 750 ಪುಟಗಳ ಪ್ರಥಮ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ವಿಧಿವಿಜ್ಞಾನ ವರದಿ ಮತ್ತಿತರ ಮಹತ್ವದ ದಾಖಲೆಗಳ ಸಹಿತ ಇನ್ನೂ ಹೆಚ್ಚಿನ ಆರೋಪಪಟ್ಟಿ ಸಲ್ಲಿಸಲು ಅವಕಾಶವಿರುವುದಾಗಿ ತಿಳಿದುಬಂದಿದೆ. ವಿನಾಯಕ ಬಾಳಿಗಾ ಕೊಲೆ ಘಟನೆಗೆ ಸಂಬಂಧಿಸಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇನ್ನಷ್ಟೆ ಬರಬೇಕಿದ್ದು, ರಕ್ತದ ಮಾದರಿ ಪರೀಕ್ಷೆಗಳ ವರದಿ ತನಿಖಾಧಿಕಾರಿಗಳ ಕೈ ಸೇರಿಲ್ಲ. ಇವೆಲ್ಲವನ್ನೂ ಕ್ರೋಢೀಕರಿಸಿ ಮತ್ತೆ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸುವ ಅವಕಾಶವನ್ನು ಮುಕ್ತವಾಗಿ ಇರಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ಆರೋಪ ಪಟ್ಟಿಯಲ್ಲಿ 2013-14ರಲ್ಲಿ ಮಂಗಳೂರಿನ ವಿಠೋಬ ದೇವಸ್ಥಾನದ ಲಾಕರ್ ಒಡೆದ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಸೇರಿದಂತೆ ಆತನ ಸಹಚರರು ದೇವಸ್ಥಾನದ ಅನುಮತಿ ಇಲ್ಲದೇ ಲಾಕರ್ ಒಡೆದಿದ್ದಾರೆ ಎಂಬ ಆರೋಪವಿದೆ. ಇದೊಂದು ಕಳ್ಳತನ ಪ್ರಕರಣವೆಂದು ಪೊಲೀಸರಿಗೆ ದೂರು ನೀಡಲಾಗಿತ್ತು.

ದೇವಸ್ಥಾನದ ಚಟುವಟಿಕೆಯನ್ನು ನಡೆಸಲು ಸುಧಾ ಸೇವಾ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಲು ನರೇಶ್ ಶೆಣೈ ಪ್ರೇರಣೆ ನೀಡಿದ್ದಾರೆ. ಆರೋಪಿ ಸ್ಥಾನದಲ್ಲಿರುವ ಅವರನ್ನು ಪ್ರತಿಷ್ಠಾನದಿಂದ ಕೈಬಿಡಬೇಕು ಎಂದು ವಿನಾಯಕ ಬಾಳಿಗಾ ಅವರು ಪ್ರತಿಷ್ಠಾನ ಸಂಚಾಲಕ ಅತುಲ್ ಕುಡ್ವ ಎಂಬವರಿಗೆ ಪತ್ರ ಬರೆದಿರುವುದನ್ನು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಕೂಡ ವಿನಾಯಕ ಬಾಳಿಗ ಕೊಲೆಯ ದ್ವೇಷಕ್ಕೆ ಕಾರಣವಾಗಿದೆ ಎಂಬ ತನಿಖಾ ವರದಿಯನ್ನು ಆರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ ಎನ್ನಲಾಗಿದೆ.

ಈ ಕೊಲೆ ಪ್ರಕರಣದಲ್ಲಿ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಎಲ್ಲ ಆರೋಪಿಗಳೂ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಆರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ ಎಂದು ತಿಳಿದುಬಂದಿದೆ.

ಮಾರ್ಚ್ 21ರಂದು ಹತ್ಯೆ :

ಮಾರ್ಚ್ 21ರಂದು ಮಂಗಳೂರು ನಗರದ ಬೆಸೆಂಟ್ ಕಾಲೇಜಿನ ಸಮೀಪ, ಪಿ.ವಿ.ಎಸ್.ಕಲಾಕುಂಜದ ಎದುರಿನ ಓಣಿಯೊಂದರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ಅವರ ನಿವಾಸದ ಎದುರು ದುಷ್ಕರ್ಮಿಗಳು ಹತ್ಯೆಗೈದಿದ್ದರು. ಅಂದು ವಿನಾಯಕ ಪಾಂಡುರಂಗ ಬಾಳಿಗರವರು ಪ್ರತೀ ದಿನದಂತೆ ಬೆಳಿಗ್ಗೆ 05-45 ಗಂಟೆಗೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ ಹೋಂಡಾ ಪ್ಲೆಸರ್ ಕೆ.ಎ.19.ಇ.ಡಿ 3098 ರಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ತಡೆದು ನಿಲ್ಲಿಸಿದ ಮೂವರು ವ್ಯಕ್ತಿಗಳು ಯದ್ವಾತದ್ವಾ ತಲವಾರಿನಿಂದ ಕಡಿದು ಅವರು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದರು.

Comments are closed.