
ಮಂಗಳೂರು, ಡಿ.27: ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹೊಸದಿಲ್ಲಿ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು, ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂರನೇ ರಾಜ್ಯ ಮಟ್ಟದ ಎರಡು ದಿನಗಳ ಬುಡಕಟ್ಟು ಉತ್ಸವ ಸೋಮವಾರ ನಗರದ ಪುರಭವನದಲ್ಲಿ ಜರಗಿತು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಸಕ ಜೆ.ಆರ್.ಲೋಬೊ ಬುಡಕಟ್ಟು ಉತ್ಸವವನ್ನು ಉದ್ಘಾಟಿಸಿದರು. ಬುಡಕಟ್ಟು ಜನಾಂಗದ ಪಾರಂಪರಿಕ ವೈದ್ಯ ಪದ್ಧತಿಯು ದೇಶದ ಸಂಪತ್ತಾಗಿದ್ದು, ಅದನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಲೋಬೋ ಈ ಸಂದರ್ಭದಲ್ಲಿ ಹೇಳಿದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಲ್ಯಾಂಪ್ಸ್ ಸ್ಟೇಡ್ ಫೆಡರೇಶನ್ನ ಅಧ್ಯಕ್ಷ ಕೃಷ್ಣಯ್ಯ ಅವರು, ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಸಮುದಾಯಕ್ಕಾಗಿರುವ ಪಾರಂಪಾರಿಕ ಅನ್ಯಾಯವನ್ನು ಸರಕಾರ ಸರಿಪಡಿಸಬೇಕು.ಕಾಡಿನಲ್ಲಿ ಖನಿಜ ಸಂಪತ್ತು ಇರುವ ಕಡೆಗಳಲ್ಲಿ ಸಾವಿರಾರು ವರ್ಷಗಳಿಂದ ಬದುಕುತ್ತಿದ್ದ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಮೂಲಕ ಅವರಿಗೆ ಪಾರಂಪಾರಿಕ ಅನ್ಯಾಯವನ್ನು ಮಾಡಲಾಗಿದೆ.ಬಡಕಟ್ಟುಗಳಲ್ಲಿ ಅಪರೂಪದ ವಿಶಿಷ್ಟ ವೈವಿಧ್ಯಮಯ ಸಂಸ್ಕೃತಿ ಇದೆ. ಬುಡಕಟ್ಟು ಜನಾಂಗಗಳ ಈ ಸಂಸ್ಕೃತಿಯನ್ನು ಸರಕಾರ ನಾಗರಿಕ ಪ್ರಪಂಚಕ್ಕೆ ಪರಿಚಯಿಸುವ ಮತ್ತು ಅದನ್ನು ಸಮಾಜಕ್ಕೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದರು.

ಆದಿವಾಸಿಗಳಲ್ಲಿ ಪಾರಂಪರಿಕ ಜ್ಞಾನ ಇದೆ. ಅವರ ಕಲೆಯ ಮೂಲ ಮತ್ತು ಜ್ಞಾನದ ಬಗ್ಗೆ ಸಂಶೋಧನೆ ನಡೆಯಬೇಕು. ಅಂಡಮಾನ್ನಲ್ಲಿ ಸುನಾಮಿ ಎದ್ದಾಗ ಸಾವಿರಾರು ಮಂದಿ ಬಲಿಯಾಗಿದ್ದರು. ಆದರೆ, ಈ ಆದಿವಾಸಿಗಳ ಪೈಕಿ ಯಾರೂ ಸತ್ತಿಲ್ಲ.
ಆಹಾರಕ್ಕಾಗಿ ಬೆಳಗ್ಗಿನ ಜಾವದಲ್ಲಿ ಆಮೆಯನ್ನು ಹಿಡಿಯಲು ಸಮುದ್ರಕ್ಕೆ ಹೋಗುವ ಆದಿವಾಸಿ ಅಂದು ಸಮುದ್ರದ ವೈಪರೀತ್ಯಯನ್ನು ಗಮನಿಸಿದ್ದಾನೆ. ನೀರಿನ ಆಗು-ಹೋಗುಗಳ ಬಗ್ಗೆ ವ್ಯತ್ಯಾಸವನ್ನು ಕಂಡಿದ್ದಾನೆ. ಜಲಚರಗಳ ವಿಚಿತ್ರ ಓಡಾಟ, ಹಕ್ಕಿಗಳು ಖಾಲಿಯಾಗಿರುವುದು ಮೊದಲಾದ ಪ್ರಾಕೃತಿಕ ಘಟನೆಗಳಿಂದ ಅಪಾಯದ ಮುನ್ಸೂಚನೆಯನ್ನು ಅರಿತುಕೊಳ್ಳುತ್ತಾನೆ. ಆದಿವಾಸಿಗಳಿಗಿರುವ ಇಂತಹ ವಿದ್ಯೆ, ಜ್ಞಾನ ಬೇರೆ ಯಾರಲ್ಲೂ ಇಲ್ಲ. ಆದ್ದರಿಂದ ಅವರ ಜ್ಞಾನದ ಬಗ್ಗೆ ಸಂಶೋಧನೆಯಾಗಬೇಕು ಎಂದು ಕೃಷ್ಣಯ್ಯ ಹೇಳಿದರು.

ರಾಜ್ಯದಲ್ಲಿರುವ ಸುಮಾರು 50 ಬುಡಕಟ್ಟು ಸಮುದಾಯವನ್ನು ಒಗ್ಗೂಡಿಸಿ ಪರಸ್ಪರರನ್ನು ಪರಿಚಯಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು.ಆಧುನಿಕ ಭರಾಟೆಯಲ್ಲಿ ಮರೆಯಾಗುತ್ತಿರುವ ಆದಿವಾಸಿಗಳ ಸಂಸ್ಕೃತಿ, ಆಚರಣೆ, ವೈದ್ಯ ಪದ್ಧತಿಯ ಜೀವನ ಶೈಲಿ ಪ್ರಪಂಚಕ್ಕೆ ಪರಿಚಯವಾಗಬೇಕು.
ರಾಜ್ಯದಲ್ಲಿರುವ 50 ಬುಡಕಟ್ಟುಗಳ ಸಮ್ಮಿಲನವಾಗಬೇಕು. ಇದಕ್ಕೆ ವಾತಾವರಣವನ್ನು ಕಲ್ಪಿಸಿ ಅವರ ಸಂಸ್ಕೃತಿ ಅನಾವರಣಗೊಳ್ಳುವಂತಾಗಬೇಕು ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇದರ ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ ಹೇಳಿದರು.
ಕರ್ನಾಟಕ ಸರಕಾರದ ಅನುಸೂಚಿತ ಬುಡಕಟ್ಟುಗಳ ಮತು ಇತರ ಪಾರಂಪರಿಕ ಅರಣ್ಯವಾಸಿಗಳ ರಾಜ್ಯಮಟ್ಟದ ಮೇಲ್ವಿಚಾರಣಾ ಸಮಿತಿಯ ಸದಸ್ಯ ವಿಠಲ ಕೆ.ಎನ್., ರೇಣುಕಾ ಪ್ರಸಾದ್, ಲ್ಯಾಂಪ್ಸ್ ಸ್ಟೇಟ್ ಫೆಡರೇಶನ್ನ ಕಾರ್ಯದರ್ಶಿ ಕಾವೇರ, ಜೇನು ಕುರುಬ ಸಮುದಾಯದ ಮುಖಂಡ ಮಧುಕುಮಾರ್, ಪಾಲ್ದಿ ಜನಾಂಗದ ಮುಖಂಡ ಶಿಕಾರಿ ರಾಮು, ಪಾಂಡಿಚೇರಿ ವಿವಿಯ ಪ್ರೊ.ಸುಬ್ರಹ್ಮಣ್ಯ ನಾಯ್ಡು, ಸಂತೋಷ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಡಾ.ಬಿ.ಎಸ್.ಹೇಮಲತಾ ಸ್ವಾಗತಿಸಿದರು.

ಮನಸೆಳೆದ ‘ದಾಮನಿ ನೃತ್ಯ’ ಪ್ರದರ್ಶನ :
ಉತ್ಸವದಲ್ಲಿಂದು ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ತಂಡಗಳಿಂದ ಆದಿವಾಸಿ ಜನಾಂಗದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಉತ್ತರ ಕನ್ನಡದ ಹಳಿಯಾಳ ತಾಲೂಕಿನ ಸಿದ್ಧಿ ಸಮುದಾಯದ ತಂಡದಿಂದ ಆಕರ್ಷಕ ‘ದಾಮನಿ ನೃತ್ಯ’ ಪ್ರದರ್ಶನ ನಡೆಯಿತು.
Comments are closed.