ಕುಂದಾಪುರ: ಅದೊಂದು ಪುಟ್ಟ ಗ್ರಾಮ. ಕಾಡು ಪ್ರದೇಶಗಳಿಂದ ಕೂಡಿದ ಕುಗ್ರಾಮವೆಂದರೂ ತಪ್ಪಾಗಲ್ಲ. ಆದರೇ ಈ ಗ್ರಾಮವೀಗ ಬರೀ ಸುದ್ದಿಯಲ್ಲಿದೆ. ನಿತ್ಯ ಅಧಿಕಾರಿಗಳು ಈ ಭಾಗಕ್ಕೆ ಬಂದು ಹೋಗ್ತಿದ್ದಾರೆ. ಎಲ್ಲಿ ನೋಡಿದರೂ ಸಣ್ಣಪುಟ್ಟ ಅಭಿವ್ರದ್ಧಿ ಕೆಲಸಗಳು ನಡೀತಾ ಇದೆ. ಇಷ್ಟು ವರ್ಷಗಳಿಂದ ಹೇಳಹೆಸರಿಲ್ಲದೇ ಯಾರೊಬ್ಬರ ಗಮನಕ್ಕೂ ಬಾರದಿದ್ದ ಈ ಊರು ಯಾವುದು.. ಈಗ್ಯಾಕೆ ಆ ಊರು ಸುದ್ದಿಯಲ್ಲಿದೆ ಅಂತೀರಾ… ಈ ಸ್ಟೋರಿ ನೋಡಿ..
(ಸಚಿವ ಎಚ್. ಆಂಜನೇಯ)
(ಮರ್ಲಿ ಕೊರಗ ಹಾಗೂ ಅವರ ನಿವಾಸ)
ಮೂರೂರಿನಲ್ಲಿ ನೂರಾರು ಸಮಸ್ಯೆಗಳು…
ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಲ್ತೋಡು ಗ್ರಾಮಪಂಚಾಯತಿ ವ್ಯಾಪ್ತಿಯ ಕುಗ್ರಾಮವೇ ಮೂರೂರು. ಬೈಂದೂರಿನ ಖಂಬದಕೋಣೆ- ಕೊಲ್ಲೂರು ಮಾರ್ಗವಾಗಿ ಸುಮರು 10 ಕಿಲೋಮೀಟರ್ ಸಾಗಿ ಅಲ್ಲಿಂದ ಬಲ ಭಾಗಕ್ಕೆ ಅರೆಶಿರೂರು ರಸ್ತೆಯಲ್ಲಿ 10 ಕಿಲೋಮೀಟರ್ ದುರ್ಗಮ ಕಾಡು ಹಾದಿಯಲ್ಲಿ ಸಾಗಿದ್ರೇ ಸಿಗೋದೆ ಈ ಕುಗ್ರಾಮ ಮೂರೂರು. ಮೂರೂರು ಗ್ರಾಮದಲ್ಲಿ ನೂರಾರು ಸಮಸ್ಯೆಗಳಿದೆ. ರಸ್ತೆ ಸಮಸ್ಯೆ, ಕುಡಿಯುವ ನೀರು, ಶಾಲೆ, ಸೇತುವೆ ಸಮಸ್ಯೆ ಹೀಗೆ ಸಮಸ್ಯೆಗಳ ತವರೂರು ಈ ಮೂರೂರು. ಇಲ್ಲಿನ ಕೊರಗ ಕಾಲನಿಯ ಪಾಡು ಕೂಡ ನಿಜಕ್ಕೂ ಶೋಚನೀಯವಾಗಿದೆ. ಸುಮಾರು 12 ಕೊರಗರ ಮನೆಯಲ್ಲಿ 62 ಮಂದಿ ಕೊರಗ ನಿವಾಸಿಗಳು ಕೂಲಿ ಕಾರ್ಯ ಮಾಡಿಕೊಂಡು ಇದ್ದಾರೆ, ಇವರ ಪೈಕಿ 12 ಮಂದಿ ವಿದ್ಯಾರ್ಜನೆ ಮಾಡುವ ಮಕ್ಕಳಿದ್ದಾರೆ. ಇವರು ಶಾಲೆಗಳಿಗೆ ತೆರಳಬೇಕಿದ್ದರೇ ಅಥವ ಪೇಟೆಗೆ ಹೋಗಬೇಕಾದರೇ ನಡೆದೇ ಸಾಗಬೇಕು. ಆದರೇ ಇದೀಗಾ ಹೊಂಡಗುಂಡಿ ಬಿದ್ದಿರುವ ಈ ರಸ್ತೆಗಳಿಗೆ ತೇಪೆ ಹಾಕಲಾಗುತ್ತಿದೆ. ಸೇತುವೆ ಇಲ್ಲದೇ ನದಿ ದಾಟಿ ಹೋಗುತ್ತಿದ್ದ ಭಾಗಕ್ಕೆ ಈಗ ತಾತ್ಕಾಲಿಕ ರಸ್ತೆ ಮಾಡಲಾಗುತ್ತಿದೆ. ಹಿಂದೆಂದೂ ಈ ಭಾಗವನ್ನು ಕಣ್ಣೆತ್ತಿಯೂ ನೋಡದ ಸರಕಾರ ಮಟ್ಟದ ಅಧಿಕಾರಿಗಳು ಹಾಗೂ ಓಟು ಬಂದಾಗ ಮಾತ್ರವೇ ಬಂದು ಹೋಗುತ್ತಿದ್ದ ಜನಪ್ರತಿನಿಧಿಗಳು ಇದೀಗಾ ನಿತ್ಯ ಬಂದು ಹೋಗ್ತಿದ್ದಾರೆ. ಇದೆಲ್ಲದಕ್ಕೂ ಕಾರಣವೂ ಇದೆ. ಹೊಸ ವರ್ಷಾಚರಣೆಯನ್ನು ಕೊರಗ ಕಾಲನಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಡಿ.31ರಂದು ಈ ಮೂರೂರು ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಕೊರಗ ಕಾಲನಿಯಲ್ಲಿರುವ ಮರ್ಲಿ ಕೊರಗ ಅವರ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮರ್ಲಿ ಕೊರಗರ ಮನೆಯಲ್ಲಿ ಸಚಿವರ ವಾಸ್ತವ್ಯ
ಡಿಸೆಂಬರ್ 31 ರಂದು ಕಾಲ್ತೋಡು ಮೂಲಕ ಆಗಮಿಸುವ ಸಚಿವ ಎಚ್. ಆಂಜನೇಯ ಅವರು ಮೂರೂರಿನಲ್ಲಿ ಸಭೆ ನಡೆಸಲಿದ್ದು ರಾತ್ರಿ ಇಲ್ಲಿಯೇ ತಂಗಲಿದ್ದಾರೆ. ಮೂರೂರು ಕೊರಗರ ಕಾಲನಿಯಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಮರ್ಲಿ ಕೊರಗರ ಮನೆಯ ಮಧ್ಯಭಾಗದ ಕೋಣೆಯಲ್ಲಿ ಸಚಿವರ ವಾಸ್ತವ್ಯಕ್ಕೆ ಅನುವು ಮಾಡಲಾಗಿದೆ. ಅಂದು ರಾತ್ರಿ ಇಲ್ಲಿಯೇ ಬಿಡಾರ ಹೂಡುವ ಸಚಿವರ ಊಟೋಪಚಾರವನ್ನು ಈ ಮನೆಯವರೇ ನೋಡಿಕೊಳ್ಳಲಿದ್ದಾರೆ. ಸಚಿವರ ಆಗಮನಕ್ಕಾಗಿ ಈ ಭಾಗದಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವುದರ ಜೊತೆಗೆ ಮರ್ಲಿ ಕೊರಗರ ಮನೆಯ ಹಿಂಭಾಗದಲ್ಲಿ ಸಚಿವರ ಅಗತ್ಯಕ್ಕೆ ಅನುಸಾರವಾಗಿ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಸಚಿವರೊಬ್ಬರು ತಮ್ಮ ಮನೆಗೆ ಬರುವ ಬಗ್ಗೆ ಮನೆ ಮಂದಿ ಫುಲ್ ಖುಷ್ ಆಗಿದ್ದಾರೆ. ಅಷ್ಟೇ ಅಲ್ಲ ಸಚಿವರ ಮೂಲಕವಾಗಿ ತಮ್ಮ ಭಾಗದ ಸಮಸ್ಯೆಗಳಿಗೆ ಒಂದು ಪರಿಹಾರ ಕಂಡುಕೊಳ್ಳುವತ್ತವೂ ಇವರು ತಯಾರಿ ನಡೆಸುತ್ತಿದ್ದಾರೆ. ಮೂರೂರಿನ ಕೊರಗ ಕಾಲನಿಯ ಪ್ರಮುಖ್ಯ ಸಮಸ್ಯೆಗಳ ಪೈಕಿ ರಸ್ತೆ ರಿಪೇರಿ, ಥ್ರೀ ಫೇಸ್ ವಿದ್ಯುತ್, ಶಾಲೆ, ಸೇತುವೆ, ಬಸ್ ಸಂಪರ್ಕ, ಹಕ್ಕುಪತ್ರ, ಮನೆಯಿಲ್ಲದ ಎರಡು ಕುಟುಂಬಕ್ಕೆ ಮನೆ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರ ಮುಂದಿಟ್ಟು ಅವರಿಂದ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ತವಕ ಇಲ್ಲಿನ ನಿವಾಸಿಗಳದ್ದು.
ಒಟ್ಟಿನಲ್ಲಿ ಮೂರೂರು ಕೊರಗ ಕಾಲನಿಯಲ್ಲಿ ವಾಸ್ತವ್ಯ ಹೂಡಿ ಹೊಸ ವರುಷವನ್ನು ಬರಮಾಡಿಕೊಳ್ಳುವ ಸಚಿವ ಆಂಜನೇಯರ ಭೇಟಿ ಬಳಿಕವಾದರೂ ಕೊರಗ ಕಾಲನಿಯ ಹಲವು ವರ್ಷಗಳ ಸಮಸ್ಯೆಗೆ ಈ ವರ್ಷಾಂತ್ಯದಲ್ಲಿ ಮುಕ್ತಿ ಸಿಕ್ಕುವ ಮೂಲಕ ನೂತನ ವರ್ಷ ಇವರ ಪಾಲಿಗೆ ಹರುಷವನ್ನು ನೀಡುವುದೇ ಕಾದುನೋಡಬೇಕಿದೆ.
——————-
ವಿಶೇಷ ವರದಿ- ಯೋಗೀಶ್ ಕುಂಭಾಸಿ