ಕರಾವಳಿ

ಡಿ.25 : ಬಿಜೆಪಿ ವೈದ್ಯಕೀಯ ಪ್ರಕೋಷ್ಠದಿಂದ ಕರಾವಳಿ ಮಲೆನಾಡಿನಾದ್ಯಂತ ವೈದ್ಯಕೀಯ ಶಿಬಿರ

Pinterest LinkedIn Tumblr

bjp_helth-camp_1

ಮಂಗಳೂರು : ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ 92ನೇ ಜನ್ಮದಿನಾಚರಣೆಯ ಅಂಗವಾಗಿ ದೇಶದಾದ್ಯಂತ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತಿದ್ದು, ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಮಾರ್ಗದರ್ಶನದಲ್ಲಿ ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಯೋಜಕತ್ವದಲ್ಲಿ ಪ್ರತೀ ಜಿಲ್ಲೆ ಹಾಗೂ ವಿಧಾನಸಭಾ ಮಟ್ಟದಲ್ಲಿ ಬಿಜೆಪಿ ನಾಯಕರುಗಳು ಹಾಗೂ ವಿವಿಧ ಪ್ರಕೋಷ್ಠಗಳ ಸಹಕಾರದೊಂದಿಗೆ ಅಲ್ಲಿಯ ವೈದ್ಯಕೀಯ ಪ್ರಕೋಷ್ಠಗಳು ವಿವಿಧ ರೀತಿಯ ವೈದ್ಯಕೀಯ, ದಂತ ವೈದ್ಯಕೀಯ ಶಿಬಿರ ಹಾಗೂ ಆರೋಗ್ಯ ಜನಜಾಗೃತಿ ಕಾರ್ಯಕ್ರಮಗಳನ್ನು ಡಿಸೆಂಬರ್ 25ರ ಭಾನುವಾರದಂದು ಹಮ್ಮಿಕೊಂಡಿದೆ.

ಕರಾವಳಿ, ಮಲೆನಾಡು ಜಿಲ್ಲೆಗಳಾದ ದಕ್ಷಿಣಕನ್ನಡ ,ಉಡುಪಿ, ಉತ್ತರ ಕನ್ನಡ, ಮಡಿಕೇರಿ, ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಪ್ರತೀ ವಿಧಾನಸಭೆಯಲ್ಲಿ ಕನಿಷ್ಠ ಒಂದು ಆರೋಗ್ಯ ಶಿಬಿರವನ್ನು ನಿಯೋಜಿಸಲಾಗಿದ್ದು, ಸುಮಾರು 40ಕ್ಕೂ ಅಧಿಕ ಶಿಬಿರಗಳು ಆಯೋಜಿತವಾಗಿದ್ದು ಆಯಾಯ ಜಿಲ್ಲೆಗಳ ಸಂಚಾಲಕರುಗಳಾದ ಡಾ|.ರಾಘವೇಂದ್ರ ಭಟ್ ಮಂಗಳೂರು, ಡಾ|.ಪ್ರದೀಪ್ ವರ್ಣೇಕರ್ ಉಡುಪಿ, ಡಾ|.ನವೀನ್ ಕೊಡಗು, ಡಾ|.ರಮೇಶ್ ಚಿಕ್ಕಮಂಗಳೂರು, ಡಾ|ಜಿ.ಜಿ.ಹೆಗಡೆ ಹೊನ್ನಾವರ ಇವರಗಳು ಇದರ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

ಅದಲ್ಲದೇ 5 ಜಿಲ್ಲೆಗಳಲ್ಲಿ ಸಾಕಷ್ಟು ನುರಿತ ವೈದ್ಯರುಗಳಲ್ಲಿ ನಾಡು ಕಂಡ ಕವಿ ಹೃದಯದ ರಾಜಕೀಯ ಮುತ್ಸದ್ಧಿಯಾದ ಅಟಲ ಬಿಹಾರಿ ವಾಜಪೇಯಿಯವರ ಹೆಸರಲ್ಲಿ ಬಡರೋಗಿಗಳಿಗೆ ತಮ್ಮ ತಮ್ಮ ಕ್ಲೀನಿಕ್‌ಗಳಲ್ಲಿ ಕನಿಷ್ಠ 1 ಅಥವಾ 2 ಬಡರೋಗಿಗಳಿಗೆ ಉಚಿತ ಸಲಹೆ, ತಪಾಸಣೆ ಹಾಗೂ ಮಾರ್ಗದರ್ಶನ ನೀಡುವಂತೆ ಕೇಳಿಕೊಂಡಾಗ ಈಗಾಗಲೇ ನಗರದ ಸುಮಾರು 25ಕ್ಕೂ ಅಧಿಕ ತಜ್ಞ ರೇಡಿಯೋಲಜಿಸ್ಟ್, ಮಕ್ಕಳ ತಜ್ಞರು, ಕುಟುಂಬ ವೈದ್ಯರು, ವೈದ್ಯಕೀಯ ತಜ್ಞರು, ಎಲುಬು ತಜ್ಞರು, ಚರ್ಮರೋಗ ತಜ್ಞರು, ಮಾನಸಿಕ ರೋಗ ತಜ್ಞರು, ಶಸ್ತ್ರಚಿಕಿತ್ಸಕರು, ದಂತವೈದ್ಯರು, ಸ್ತ್ರೀರೋಗ ತಜ್ಞರು , ಕಿವಿ ಮೂಗು ಗಂಟಲು ತಜ್ಞರು , ಕಣ್ಣಿನ ತಜ್ಞರು, ಹೃದಯರೋಗ ತಜ್ಞರು ಉಚಿತ ಸೇವೆ ನೀಡಲು ಒಪ್ಪಿಕೊಂಡಿದ್ದು ಡಿಸಂಬರ್ 24 ಹಾಗೂ 25ರಂದು ಆಯ್ದ ಬಡರೋಗಿಗಳಿಗೆ ಸಹಾಯ ಮಾಡಲಿದ್ದಾರೆ.

ಇನ್ನು ಹಲವು ವೈದ್ಯರುಗಳು ಈ 5 ಜಿಲ್ಲೆಗಳಲ್ಲಿ ಬಡರೋಗಿಗಳ ಸಹಾಯಕ್ಕೆ ಮುಂದೆ ಬರುವ ಸಾಧ್ಯತೆ ಇದ್ದು ಮತ್ತಷ್ಟು ವೈದ್ಯಕೀಯ ಸಹಾಯ ಬಡರೋಗಿಗಳಿಗೆ ಸಿಗಲಿದೆ.

ಆಸಕ್ತರು ಆಯಾಯ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರನ್ನು ಸಂಪರ್ಕಿಸಿ ಬಡರೋಗಿಗಳಿಗೆ ಸಹಾಯ ದೊರಕಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸಹಸಂಚಾಲಕರೂ ಹಾಗೂ ಕರಾವಳಿ, ಮಲೆನಾಡು ವಿಭಾಗದ ಉಸ್ತುವಾರಿಯಾದ ಡಾ|.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ತಿಳಿಸಿದ್ದಾರೆ.

Comments are closed.