ಕರ್ನಾಟಕ

ರಾಜ್ಯದ ವಿವಿಧೆಡೆ ಅಧಿಕಾರಿಗಳ ನಿವಾಸಗಳ ಮೇಲೆ ACB ದಾಳಿ

Pinterest LinkedIn Tumblr

acb1

ಬೆಂಗಳೂರು: ಭ್ರಷ್ಟ ಅಧಿಕಾರಿಗಳು ಹಾಗೂ ಕಾಳಧನಿಕರ ವಿರುದ್ಧ ದಾಳಿ ಮುಂದುವರೆಸಿರುವ ಎಸಿಬಿ ಅಧಿಕಾರಿಗಳು ಗುರುವಾರ ಏಕಕಾಲದಲ್ಲಿ ರಾಜ್ಯಾದ್ಯಂತ ದಾಳಿ ನಡೆಸಿದ್ದಾರೆ.

ಬೆಂಗಳೂರು, ಮಂಗಳೂರು, ದಕ್ಷಿಣ ಕನ್ನಡ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ ಸೇರಿದಂತೆ ಒಟ್ಟು 6 ಜಿಲ್ಲೆಗಳ 12 ಪ್ರದೇಶಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಬಿಯ ಒಟ್ಟು 7ಕ್ಕೂ ಹೆಚ್ಚು ಡಿವೈಎಸ್ ಪಿ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಓರ್ವ ಶಿಕ್ಷಕ, ಪ್ರಾಂಶಪಾಲ ಸೇರಿದಂತೆ ಒಟ್ಟು 7 ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.

ಈ ಪೈಕಿ ಬಳ್ಳಾರಿಯಲ್ಲಿ ಜಿಲ್ಲಾಸ್ಪತ್ರೆ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಪಂಪಾವತಿ ಅವರ ಕುವೆಂಪುನಗರದಲ್ಲಿರುವ ನಿವಾಸ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗುರುವಾಯಿನಕೆರೆ ತಾಲೂಕು ಕಚೇರಿ ಸೂಪರಿಟೆಂಡೆಂಟ್ ಗೋವಿಂದ್ ನಾಯಕ್ ನಿವಾಸದಲ್ಲಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಪೈಕಿ ಗೋವಿಂದ್ ನಾಯಕ್ ನಿವಾಸದಲ್ಲಿ ಚಿನ್ನಾಭರಣ ಹಾಗೂ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಬಿಎಂಪಿ ಯೋಜನೆ ವಿಭಾಗದ ಸಹಾಯಕ ನಿರ್ದೇಶಕ ಬಸವರಾಜು ಅವರ ಮನೆ ಹಾಗೂ ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ವಿಜಯ್ ಕುಮಾರ್ ಅವರ ಬಸವೇಶ್ವರ ನಗರದಲ್ಲಿರುವ ಮನೆ, ಮಹದೇವ ಪುರ ಟೌನ್ ಪ್ಲಾನಿಂಗ್ ಸಹಾಯಕ ನಿರ್ದೇಶಕರ ಮನೆ ಮೇಲೆ ಎಸಿಬಿ ಡಿವೈಎಸ್ ಪಿ ಜಿ ಮಂಜುನಾಥ್ ನೇತೃತ್ವಲ್ಲಿ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಂತೆಯೇ ಚಿತ್ರದುರ್ಗದ ತರಳಬಾಳು ನಗದರಲ್ಲಿರುವ ಪಿಡಬ್ಲ್ಯುಡಿ ಇಲಾಖೆ ಎಇ ಹೆಚ್ ಎಲ್ ಪುಟ್ಟಲಿಂಗಯ್ಯ ಅವರ ಮನೆ, ದಾವಣಗೆರೆಯಲ್ಲಿ ಕೆಆರ್ ಐಡಿಎಲ್ ಎಇಇ ಉಮೇಶ್ ಪಾಟೀಲ್ ಅವರ ನಿವಾಸದ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ,

Comments are closed.