ಕರಾವಳಿ

ಬಿಜೆಪಿ ಪಕ್ಷಕ್ಕೆ ಹಾಲಾಡಿ ಹಾಗೂ ಜೆ.ಪಿ. ಹೆಗ್ಡೆ ಬರಬಾರದೆಂಬ ಅಧಿಕಾರ ಯಾರಿಗಿಲ್ಲ: ಕರಂದ್ಲಾಜೆ

Pinterest LinkedIn Tumblr

ಕುಂದಾಪುರ : ಕುಂದಾಪುರದಲ್ಲಿನ ಬಿಜೆಪಿ ಪಕ್ಷದಲ್ಲಿ ಯಾವುದೆ ಭಿನ್ನಮತ ಇಲ್ಲ, ನಾವೆಲ್ಲ ಒಟ್ಟಿಗೆ ಇದ್ದೇವೆ. ಕುಂದಾಪುರದ ಪಕ್ಷೇತರ ಶಾಸಕರು ಈಚೆಗೆ ಬೆಂಗಳೂರಿನಲ್ಲಿ ನಡೆದ ಹಿಂದುಳಿದ ವರ್ಗದ ಸಮಾವೇಶಕ್ಕೆ ಪ್ರೇಕ್ಷಕರಾಗಿ ಬಂದಿದ್ದರು. ಬಿಜೆಪಿ ಪಕ್ಷದ ಕಾರ್ಯಕ್ರಮವನ್ನು ಮೆಚ್ಚಿ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ. ನಾಳೆ ಜಯಪ್ರಕಾಶ ಹೆಗ್ಡೆ ಬಿಜೆಪಿ ಗೆ ಬರುತ್ತೇನೆ ಎಂದರೂ, ಅವರನ್ನು ಸೇರಿಸಿಕೊಳ್ಳಬಹುದಾ ಎನ್ನುವ ಯೋಚನೆಯಲ್ಲಿ ನಾವಿದ್ದೇವೆ. ಯಾರೋ ಒಬ್ಬರೋ, ಇಬ್ಬರೋ, ಆಕ್ಷೇಪ ಮಾಡಿದ್ದರೆ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತೇವೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಗೆ ಇಂತಹವರು ಬರಬಾರದು ಎಂದು ಆಕ್ಷೇಪ ಮಾಡಲು ಯಾರಿಗೂ ಅಧಿಕಾರ ಇಲ್ಲ ಎಂದು ಸ್ವಷ್ಟಪಡಿಸಿದರು.

ಇಲ್ಲಿಗೆ ಸಮೀಪದ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸುವ ಮೊದಲು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

kundapura_bjp_programme-5 kundapura_bjp_programme-1 kundapura_bjp_programme-6 kundapura_bjp_programme-3 kundapura_bjp_programme-2 kundapura_bjp_programme-4

ತನ್ನನ್ನು ಸೇರಿ ಮುಂಬರುವ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗಳನ್ನು ಸರ್ವೇ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಜಯಪ್ರಕಾಶ ಹೆಗ್ಡೆ ಇನ್ನೂ ಪಾರ್ಟಿಗೆ ಬಾರದೆ ಇರುವುದರಿಂದಾಗಿ ಅವರು ಯಾವ ಕ್ಷೇತ್ರದ ಅಭ್ಯರ್ಥಿ ಎನ್ನುವುದು ಅಪ್ರಸ್ತುತ ಎಂದು ತಿಳಿಸಿದ ಅವರು ಕೇಂದ್ರ ಸರ್ಕಾರದ ಸಿ‌ಆರ್‌ಎಫ್ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಗೆ ೨೦೦ ಕೋಟಿ ರೂಪಾಯಿಯ ಯೋಜನೆ ಮಂಜೂರಾಗಿದೆ ಎಂದರು.

ಬಳೀಕ ಸಮಾವೇಶವನ್ನು ಉದ್ಘಾಟಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆಯವರು ಹೊಸ ಕಾನೂನಿನಂತೆ ಯಾವುದೆ ಪಕ್ಷೇತರ ಶಾಸಕ ಚುನಾವಣೆ ಆದ ೬ ತಿಂಗಳ ಒಳಗೆ ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎನ್ನುವುದನ್ನು ತಿಳಿಸಬೇಕು. ಅದರಂತೆ ಇಲ್ಲಿಯವರೆಗೆ ಯಾವುದೆ ಪಕ್ಷದ ಸೇರ್ಪಡೆಯನ್ನು ಘೋಷಣೆ ಮಾಡದ, ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಬಿಜೆಪಿ ಸಹ ಸದಸ್ಯನಾಗುತ್ತೇನೆ ಎಂದು ಹೇಳಿದರು ಕಾನೂನಿನಡಿಯಲ್ಲಿ ಅದಕ್ಕೆ ಅವಕಾಶವಿಲ್ಲ. ಈ ಕಾರಣದಿಂದ ಶ್ರೀನಿವಾಸ ಶೆಟ್ಟಿಯವರು ಬೆಂಗಳೂರಿನ ಸಮಾವೇಶದಲ್ಲಿ ಹಾಗೂ ಇಂದಿನ ಸಮಾವೇಶದಲ್ಲಿ ವೇದಿಕೆಗೆ ಬಾರದೆ ಪ್ರೇಕ್ಷಕರಾಗಿಯೇ ಕುಳಿತು ಬಿಜೆಪಿ ಅಧ್ಯಕ್ಷರಾದ ಅಮೀತ್ ಶಾ ಹಾಗೂ ಯಡಿಯೂರಪ್ಪನವರ ಹೋರಾಟಕ್ಕೆ ಬೆಂಬಲ ಸೂಚಿಸಿ ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಹಾಲಾಡಿಯವರು ಬಿಜೆಪಿಯ ಜತೆಯಲ್ಲಿ ಇರುತ್ತಾರೆ ಎಂದು ಹೇಳಿದ ಅವರು ಬಹಳಷ್ಟು ಕಾರ್ಯಕರ್ತರು ಹಾಲಾಡಿಯವರನ್ನು ಯಾಕೆ ಬಿಜೆಪಿ ಗೆ ಸೇರಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಪದೆ ಪದೆ ಕೇಳುತ್ತಾ ಇರೋದರಿಂದಾಗಿ ಈ ಸ್ವಷ್ಟನೆ ನೀಡುತ್ತಿರುವುದಾಗಿ ತಿಳಿಸಿದರು.

೨೦೧೮ ರ ಚುನಾವಣೆಯಲ್ಲಿ ಬಿಜೆಪಿ ೧೫೦ ಕ್ಕೆ ಹೆಚ್ಚು ಸ್ಥಾನ ಗೆಲ್ಲುತ್ತದೆ ಎನ್ನುವ ಭರವಸೆ ಇದೆ. ಆದರೆ ಇದು ಸುಲಭ ಸಾಧ್ಯ ಗುರಿಯಲ್ಲ ಹಾಸನ, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪಕ್ಷ ಇನ್ನಷ್ಟು ಗಟ್ಟಿಯಾಗಬೇಕಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ತುಲನೆ ಮಾಡಿದಾಗ ಯಾರು ಜನಪರ ಎನ್ನುವುದು ತಿಳಿಯುತ್ತದೆ. ವ್ಯವಸ್ಥಿತ ಷಡ್ಯಂತ್ರಗಳ ಮೂಲಕ ಸುವರ್ಣ ಗ್ರಾಮ, ಸುವರ್ಣ ಭೂಮಿ, ಭಾಗ್ಯಲಕ್ಷ್ಮೀ ಯೋಜನೆಯಂತಹ ಜನಪರ ಯೋಜನೆಗಳನ್ನು ನಿಲ್ಲಿಸುವ ಹುನ್ನಾರ ನಡೆಯುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಬಂದ ಸಾವಿರಾರು ಕೋಟಿ ರೂಪಾಯಿ ಅನುದಾನದ ದುರುಪಯೋಗ ಆಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ರಾಜ್ಯದ ನೀರಾವರಿ ಯೋಜನೆಗಳನ್ನು ಪುರ್ತಿ ಮಾಡುವುದಾಗಿ ಹೇಳಿತ್ತು, ಆದರೆ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಕಳೆದಿದ್ದರೂ, ವರಾಹಿ ಸೇರಿದಂತೆ ಯಾವುದೆ ನೀರಾವರಿ ಯೋಜನೆಗಳು ಪೂರ್ತಿಯಾಗಿಲ್ಲ. ಕೇಂದ್ರ ಸರ್ಕಾರ ನೀರಾವರಿ ಯೋಜನೆಗಾಗಿ ನೀಡಿದ ೧೦,೦೦೦ ಕೋಟಿ ಅನುದಾನವನ್ನು ನೀರಾವರಿ ಸಚಿವರುವ ಗೋಲ್‌ಮಾಲ್ ಮಾಡಿದ್ದಾರೆ ಎಂದು ಆರೋಪಿಸಿದ ಅವರು ಈ ಕುರಿತು ತನಿಖೆಗಾಗಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಶೈಲಿಯನ್ನು ನೋಡುತ್ತಿರುವ ರಾಜ್ಯದ ಜನತೆ ಬಹಳ ದಿನ ಈ ಸರ್ಕಾರ ಬಾಳೋದಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದಾಗಿ ಇನ್ನೂ ೬ ತಿಂಗಳ ಒಳಗೆ ಚುನಾವಣೆಗೆ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
ಕಾಂಗ್ರೆಸಿನ ದೈನಸಿ ಸ್ಥಿತಿಯಿಂದಾಗಿ ಆ ಪಕ್ಷದ ಸಚಿವರು ಹಾಗೂ ಶಾಸಕರು ಬಿಜೆಪಿ ಬರಲು ಪಿಸು ಮಾತನ್ನಾಡುತ್ತಿರುವ ಸನ್ನಿವೇಶಗಳು ನಿರ್ಮಾಣವಾಗಿದೆ. ಸೈನಿಕರು ದಿನನಿತ್ಯ ಅಭ್ಯಾಸ ಮಾಡಿದಂತೆ, ಚುನಾವಣೆ ಎಂದರೆ ಪಕ್ಷದ ಕಾರ್ಯಕರ್ತರಲ್ಲಿ ದಿನನಿತ್ಯ ರಣೋತ್ಸಾಹ ಇರಬೇಕು. ಭಾರತ ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ನೋಟ ನಿಷೇದ ಮಾಡಿದಾಗ ದೇಶಾದ್ಯಾಂತ ವಿದ್ಯುತ್ ಸಂಚಾರವಾಯಿತು. ಆದರೆ ಕಾಂಗ್ರೆಸ್ ಪಕ್ಷ ನಾಗರೀಕ ಸಮಾಜ ನಾಚಿಕೆಯಾಗುವಂತೆ ಸಂಸತ್ ಅಧಿವೇಶನವನ್ನು ನಡೆಯಲಿಕ್ಕೆ ಬಿಡದೆ, ಕೋಟ್ಯಾಂತರ ರೂಪಾಯಿ ನಷ್ಟಕ್ಕೆ ಕಾರಣವಾಯಿತು. ಇದರಿಂದ ಕಾಂಗ್ರೆಸ್ ಒಳ್ಳೆಯದಾಗಲಿಲ್ಲ, ದೇಶಕ್ಕೂ ಒಳಿತಾಗಲಿಲ್ಲ. ಲೋಕಸಭೆಯನ್ನು ಬಿಹಿಷ್ಕಾರ ಮಾಡಿದ ರಾಹುಲ್ ಗಾಂಧಿ ಸಂಸತ್ ಅಧಿವೇಶ ಮುಗಿದ ಬಳಿಕ ತನ್ನ ಬಳಗದೊಂದಿಗೆ, ಏಕಾಂಗಿಯಾಗಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ರೈತರ ಸಾಲ ಮನ್ನಾ ಮಾಡಿ ಎನ್ನುವ ಮನವಿ ನೀಡುವ ಮೂಲಕ ತಮ್ಮ ಇಬ್ಬಗೆಯ ನೀತಿಯನ್ನು ಪ್ರದರ್ಶಿಸುತ್ತಿರುವುದು ಆ ಪಕ್ಷದ ರಣಹೇಡಿತನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಬಿಜೆಪಿ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ, ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗವೀರ, ಉಪಾಧ್ಯಕ್ಷ ಕಡ್ಕೆ ಪ್ರವೀಣ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ತಾರಾನಾಥ ಶೆಟ್ಟಿ, ರಾಘವೇಂದ್ರ ಕಾಂಚನ್ ಬಾರಿಕೆರೆ,ಶ್ರೀಲತಾ ಸುರೇಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ಲಕ್ಷ್ಮೀ ಮಂಜು ಬಿಲ್ಲವ, ಸುಪ್ರೀತ್ ಉದಯ್ ಕುಲಾಲ್, ನಳೀನಿ ಪ್ರದೀಪ್, ಪ್ರತಾಪ್ ಹೆಗ್ಡೆ ಮಂದರ್ತಿ, ಯಶ್‌ಪಾಲ ಸುವರ್ಣ, ಸುಪ್ರಸಾದ ಶೆಟ್ಟಿ ಬೈಕಾಡಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಣಪತಿ ಟಿ ಶ್ರೀಯಾನ್, ಪ್ರಕಾಶ ಟಿ ಮೆಂಡನ್, ಶ್ಯಾಮಲಾ ಕುಂದರ್, ಜ್ಯೋತಿ ಉದಯ್ ಪೂಜಾರಿ, ಪ್ರಕಾಶ ಭಂಡಾರಿ, ಸಂಧ್ಯಾ ರಮೇಶ್, ಕುಂದಾಪುರ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು ಇದ್ದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ ಕೋಣಿ ಸ್ವಾಗತಿಸಿದರು, ಬಿಜೆಪಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಶಂಕರ ಅಂಕದಕಟ್ಟೆ ನಿರೂಪಿಸಿದರು, ಯುವ ಮೋರ್ಚಾ ಅಧ್ಯಕ್ಷ ಸತೀಶ್ ಪೂಜಾರಿ ವಕ್ವಾಡಿ ವಂದಿಸಿದರು.

Comments are closed.