ತುಂಬೆ ನೂತನ ಅಣೆಕಟ್ಟೆಗೆ ಸಚಿವ ರೈ ಅವರಿಂದ ಬಾಗಿನ ಅರ್ಪಣೆ – ಮಂಗಳೂರು ವ್ಯಾಪ್ತಿಯಲ್ಲಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಇಲ್ಲ?..
ಮಂಗಳೂರು,ಡಿ.20: ಮಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ಹಳೆ ಡ್ಯಾಂ ಬಳಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನೂತನ ಅಣೆಕಟ್ಟೆಗೆ ರಾಜ್ಯ ಪರಿಸರ, ಜೀವಿಶಾಸ್ತ್ರ ಮತ್ತು ಅರಣ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಅವರು ಮಂಗಳವಾರ ಬಾಗಿನ ಅರ್ಪಿಸಿದರು.
ಹಿಂದಿನ ಅಣೆಕಟ್ಟಿನಲ್ಲಿ ನೀರಿನ ಸೋರಿಕೆ ಹೆಚ್ಚುತ್ತಾ ಸಾಗಿದ ಪರಿಣಾಮವಾಗಿ ಹೊಸ ಕಿಂಡಿ ಅಣೆಕಟ್ಟು ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಬೇಕಾಯಿತು. ಈ ಯೋಜನೆ 2007ರಲ್ಲಿ ಆರಂಭಗೊಂಡು ನಿಧಾನ ಗತಿಯಲ್ಲಿ ಸಾಗುತ್ತಿತ್ತು. ಇದೀಗ ಸುಮಾರು 75.50 ಕೋಟಿ ರೂ.ಯೋಜನೆಯ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದು, ಪ್ರಸಕ್ತ ಈ ಅಣೆಕಟ್ಟಿನಲ್ಲಿ ಸುಮಾರು ನಾಲ್ಕೂವರೆ ಮೀಟರ್ ನೀರು ಶೇಖರಣೆಯಾಗಿರುವ ಹಿನ್ನೆಲೆಯಲ್ಲಿ ಅವರು ಬಾಗಿನ ಅರ್ಪಿಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ರಾಜ್ಯದ ನಗರಾಭಿವೃದ್ಧಿ ಸಚಿವರಾದ ಬಳಿಕ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಈ ಯೋಜನೆಗೆ ಹೆಚ್ಚುವರಿ ಹಣ ಮಂಜೂರು ಮಾಡಲು ಕಾರಣರಾಗಿದ್ದಾರೆ. ಮಂಗಳೂರಿಗೆ ಈ ಬಾರಿ ನೀರಿನ ಸಮಸ್ಯೆಯಾಗುವುದಿಲ್ಲ. ಹೊಸ ಡ್ಯಾಂನಿಂದ ಮುಳುಗಡೆಯಾಗುವ ಪ್ರದೇಶದ ರೈತರಿಗೆ ಪರಿಹಾರ ನೀಡಲಾಗುವುದು ಎಂದರು.
ನೀರು ಪ್ರಕೃತ್ತಿ ದತ್ತವಾಗಿ ದೇವರು ಸಕಲ ಜೀವ ರಾಶಿಗಳಿಗೆ ನೀಡಿದ ಸಂಪತ್ತು ಅದನ್ನು ಹಂಚಿ ಮಿತವಾಗಿ ಬಳಸಬೇಕಾಗಿದೆ. ಪರಿಸರದ ರಕ್ಷಣೆ, ಜೀವಿಗಳ ರಕ್ಷಣೆ ನೀರಿನ ಸಂರಕ್ಷಣೆ ಜೊತೆಯಾಗಿ ಸಾಗಬೇಕು.ಕರಾವಳಿಯಲ್ಲಿ ಅಂತರ್ಜಲಮಟ್ಟವನ್ನು ಏರಿಸಲು ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಪಶ್ಚಿಮವಾಹಿನಿ ಯೋಜನೆ ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರದ ಯೋಜನೆಯಾಗಬಹುದು. ಪ್ರಸಕ್ತ ಈ ಯೋಜನೆಯಿಂದ ಸಂತ್ರಸ್ತರಾಗುವ ಕೃಷಿಕರಿಗೆ, ಭೂಮಿಯ ಮಾಲಕರಿಗೆ ಪರಿಹಾರವನ್ನು ನೀಡಲು ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ರಮಾನಾಥ ರೈ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹರಿನಾಥ್ ಅವರು ಮಾತನಾಡಿ, ತುಂಬೆ ಕಿಂಡಿ ಅಣೆಕಟ್ಟಿನ ನೀರಿನ ಸಂಗ್ರಹದಲ್ಲಿ ಮುಳುಗಡೆಯಾಗುವ ಸುಮಾರು 12 ಎಕ್ರೆ ಖಾಸಗಿ ಭೂಮಿಯ 18 ರೈತರ ಕುಟುಂಬಗಳಿಗೆ ವಾರ್ಷಿಕ ಬಾಡಿಗೆ ಒಟ್ಟು 16ಲಕ್ಷ 20 ಸಾವಿರ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಶಾಸಕರಾದ ಜೆ.ಆರ್.ಲೋಬೊ, ಮೊಹಿಯುದ್ದೀನ್ ಬಾವ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಬಂಟ್ವಾಳ ಪುರಸಭೆಯ ಅಧ್ಯಕ್ಷ ರಾಮಕೃಷ್ಣ ಆಳ್ವಾ,ಉಪಾಧ್ಯಕ್ಷ ಮುಹಮ್ಮದ್,ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ,ಮನಪಾ ಉಪಾಧ್ಯಕ್ಷೆ ಸುಮಿತ್ರಾ ಕರಿಯ,ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಸನಿಲ್, ಅಪ್ಪಿ, ಮನಪಾ ವಿಪಕ್ಷ ನಾಯಕಿ ರೂಪಾ ಡಿ.ಬಂಗೇರಾ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್,ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾ,ತುಂಬೆ ಪಂಚಾಯತ್ ಅಧ್ಯಕ್ಷೆ ಹೇಮಲತಾ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.