ಕುಂದಾಪುರ: ಭಾರತದ ಪರವಾಗಿ ಮೂರು ಯುದ್ಧಗಳಲ್ಲಿ ಹೋರಾಡಿದ ಹಾಗೂ ಪ್ರಥಮ ರಾಷ್ಟ್ರಾಧ್ಯಕ್ಷ, ಸ್ವಾತಂತ್ರ್ಯ ಸೇನಾನಿ, ಕಾನೂನು ತಜ್ಞ ಭಾರತ ರತ್ನ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಅಂಗ ರಕ್ಷಕರಾಗಿ ಸೇವೆ ಸಲ್ಲಿಸಿದ್ದ ವೀರ ಯೋಧ ಸಾಸ್ತಾನ ನಿವಾಸಿ ಮೇಜರ್ ನಾರಾಯಣ(85) ಅಸೌಖ್ಯದಿಂದ ನಿಧನರಾಗಿದ್ದಾರೆ.
1952ರಲ್ಲಿ ಸೇನೆಗೆ ಸೇರ್ಪಡೆಗೊಂಡು 1962ರ ಭಾರತ ಚೀನಾ ಯುದ್ಧ, 1971ರ ಭಾರತ ಪಾಕಿಸ್ಥಾನ ಯುದ್ಧ ಹಾಗೂ ಭಾರತ ಬಾಂಗ್ಲಾ ಯುದ್ಧದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿ ವೀರ ಪದಕ ಪಡೆದಿದ್ದರು. ನಾಗಾಲ್ಯಾಂಡ್ ಬಂಡುಕೋರರನ್ನು ಹಿಮ್ಮೆಟ್ಟಿಸಿದ ತಂಡದಲ್ಲಿ ಪ್ರಮುಖರಾಗಿದ್ದು ಕಿಂಗ್ ಆಫ್ ನಾಗ ಹಿಲ್ಸ್ ಬಿರುದು ಪಡೆದಿದ್ದರು.
1972 ರಲ್ಲಿ ಸೇನೆಯಿಂದ ನಿವೃತ್ತಿ ಪಡೆದು ಮಾಜಿ ಸೈನಿಕರ ಸಂಘದ ಪದಾಧಿಕಾರಿಯಾಗಿ, ಹವ್ಯಾಸಿ ಲೇಖಕರಾಗಿ ನಿವೃತ್ತ ಜೀವನ ನಡೆಸುತ್ತಿದ್ದರು. ಪ್ರಶಸ್ತಿ, ಪುರಸ್ಕಾರಗಳಿಗೆ ಆಸೆ ಪಡದ ಅವರನ್ನು ಸಾಸ್ತಾನದಲ್ಲಿ ಯುವಬ್ರಿಗೇಡ್ ವತಿಯಿಂದ ನಡೆದ ‘ನಾನು ಮತ್ತು ನನ್ನ ಭಾರತ’ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗಿತ್ತು.