ರಾಷ್ಟ್ರೀಯ

ಪೆರಿಯಾರ್ ನದಿಯಲ್ಲಿ ಮುಳುಗಿ ದೆಹಲಿ ಮೂಲದ 3 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 4 ಮಂದಿ ಸಾವು

Pinterest LinkedIn Tumblr

water

ಪೆರಂಬವೂರು: ಪ್ರವಾಸಕ್ಕೆಂದು ಕೇರಳಕ್ಕೆ ಹೋಗಿದ್ದ ದೆಹಲಿ ಮೂಲದ ವಿದ್ಯಾರ್ಥಿಗಳು ಪೆರಿಯಾರ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಭೀಕರ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ದೆಹಲಿಯ ಪ್ರತಿಷ್ಟಿತ ಸೆಂಟ್ ಸ್ಟೀಫನ್ಸ್ ಕಾಲೇಜಿನ 3 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ನಾಲ್ಕು ಮಂದಿ ಕೇರಳದ ಪೆರಿಯಾರ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತರನ್ನು ಬಿಹಾರ ಮೂಲದ ಅನುಭವ್ ಚಂದ್ರ (20 ವರ್ಷ), ಉತ್ತರ ಪ್ರದೇಶ ಮೂಲದ ಆದಿತ್ಯಾ ಪಟೇಲ್ (20 ವರ್ಷ), ವಯನಾಡ್ ಮೂಲದ ಕೆನ್ನೆತ್ ಜೋಸ್ (20 ವರ್ಷ), ರೆಸಾರ್ಟ್ ಮಾಲೀಕ ಅಲಿಯಟ್ಟುಕುಡಿ ಬೆನ್ನಿ (45 ವರ್ಷ) ಎಂದು ಗುರುತಿಸಲಾಗಿದೆ.

ಈ ಪೈಕಿ ಅನುಭವ್ ಚಂದ್ರ, ಆದಿತ್ಯಾ ಪಟೇಲ್ ಮತ್ತು ಕೆನ್ನೆತ್ ಜೋಸ್ ದೆಹಲಿಯ ಸೆಂಟ್ ಸ್ಟೀಫನ್ಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ರಜೆ ಪ್ರವಾಸಕ್ಕೆಂದು ಕೇರಳಕ್ಕೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಒಟ್ಟು 13 ಮಂದಿ ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆಂದು ಕೇರಳದ ಪೆನಿಯೇಲಿಪೊರು ಪ್ರದೇಶಕ್ಕೆ ಆಗಮಿಸಿದ್ದು, ಈ ಪೈಕಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಹ ವಿದ್ಯಾರ್ಥಿಗಳು ತಿಳಿಸಿರುವಂತೆ ಅನುಭವ್ ಚಂದ್ರ ಹಾಗೂ ಆದಿತ್ಯಾ ಪೆರಿಯಾರ್ ನದಿಯಲ್ಲಿ ಮುಳುಗುತ್ತಿದ್ದರು. ಇವರಿಬ್ಬರ ರಕ್ಷಣೆಗೆಂದು ಕೆನ್ನೆತ್ ಮತ್ತು ಬೆನ್ನಿ ನೀರಿಗೆ ಧುಮುಕಿದರು. ಆದರೆ ಎಲ್ಲ ನಾಲ್ಕೂ ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು ಎಂದು ಹೇಳಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ತಿರುಮಲಕ್ಕಡವಿಲ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ನದಿ ಧುಮುಕಿ ಎಲ್ಲ ನಾಲ್ಕು ಶವಗಳನ್ನು ಸಮೀಪದ ಪೆರಂಬೂರು ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಪೆನಿಯೇಲಿಪೊರು ಖ್ಯಾತ ಪ್ರವಾಸಿ ಕೇಂದ್ರವಾಗಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಇಲ್ಲಿರುವ ಪೆರಿಯಾರ್ ನದಿ ತೀರಾ ಆಳವಾಗಿ ಮತ್ತು ರಭಸವಾಗಿ ಹರಿಯುತ್ತದೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಹತ್ತಾರು ಮಂದಿ ಪ್ರವಾಸಿಗರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇದೇ ಕಾರಣಕ್ಕೆ ಸ್ಥಳೀಯ ಪೊಲೀಸರು ಈ ಪ್ರವಾಸಿ ಕೇಂದ್ರವನ್ನು ಸುಮಾರು ವರ್ಷಗಳ ಕಾಲ ಮುಚ್ಚಿದ್ದರು. ಆದರೆ ಸ್ಥಳೀಯ ನಿವಾಸಿಗಳ ಒತ್ತಾಯದ ಮೇರೆಗೆ ಪ್ರವಾಸಿ ಕೇಂದ್ರ ಮತ್ತೆ ತೆರಯಲಾಗಿತ್ತು.

Comments are closed.