ಕುಂದಾಪುರ: ಉಡುಪಿ ಜಿಲ್ಲೆ ಅದರಲ್ಲೂ ಕುಂದಾಪುರ ತಾಲೂಕಿನ ಪರಿಸರದಲ್ಲಿ ಗ್ರಾಮೀಣ ಭಾಗದಲ್ಲಿ ಸರಕಾರಿ ಜಾಗದಲ್ಲಿ ಮನೆಕಟ್ಟಿಕೊಂಡು, 94ಸಿ ಯೋಜನೆಯಡಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ 2 ವರ್ಷದಿಂದ ಕಾಯುತ್ತಿರುವ ಬಡ ಜನರಿಗೆ ಹಕ್ಕುಪತ್ರ ನೀಡಲು ಕಂದಾಯ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದ್ದು ಈ ವಿಳಂಬ ನೀತಿ ಖಂಡಿಸಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತ್ರತ್ವದಲ್ಲಿ ಕುಂದಾಪುರ ತಾಲೂಕು ಹಾಗೂ ಸಹಾಯಕ ಕಮೀಶನರ್ ಕಛೇರಿ ಹೊಂದಿರುವ ಮಿನಿ ವಿಧಾನ ಸೌಧದೆದುರು ಹಕ್ಕು ಪತ್ರ ವಂಚಿತರು ಒಗ್ಗೂಡಿ ಧರಣಿ ನಡೆಸಿದರು.
ಕೋಟ ಹೋಬಳಿಯೂ ಸೇರಿದಂತೆ ಕುಂದಾಪುರ ತಾಲೂಕಿನಲ್ಲಿ 7 ಸಾವಿರಕ್ಕೂ ಮಿಕ್ಕಿ 94ಸಿ ಮತ್ತು ಸಿಸಿ ಅರ್ಜಿದಾರರು ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದು ಕೆಲವು ಗ್ರಾಮ ಪಂಚಾಯತ್ಗಳಲ್ಲಿ ಒಂದೂ ಹಕ್ಕು ಪತ್ರವನ್ನು ವಿತರಿಸಿಲ್ಲ. ತಾಲೂಕು ಕಛೇರಿಯಲ್ಲಿ ಹಕ್ಕು ಪತ್ರಗಳ ವಿತರಣೆಯ ಕೆಲಸಗಳೇ ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರ ಮನೆಯ ನಿವೇಶನಗಳ ಸರ್ವೆಯೂ ನಡೆಯುತ್ತಿಲ್ಲ. ಕನಿಷ್ಠ ಕಂದಾಯ ಇಲಾಖೆಯ ಅಧಿಕಾರಿಗಳು ವರದಿಯನ್ನೆ ಸಮರ್ಪಕಗೊಳಿಸಿಲ್ಲ ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಬಡವರ ಹಕ್ಕುಪತ್ರಗಳ ಬಗ್ಗೆ ಸರಕಾರ ನೀಡಿದ ಭರವಸೆ ಅನುಷ್ಠಾನವಾಗುತ್ತಿಲ್ಲ. ಉಡುಪಿಯಲ್ಲಿ ಸ್ವತಃ ಕಂದಾಯ ಮಂತ್ರಿಗಳೆ ಒಂದು ತಿಂಗಳಲ್ಲಿ ೯೪ಸಿ ಹಕ್ಕು ಪತ್ರಗಳನ್ನು ವಿತರಿಸಿ ವರದಿ ಕೊಡಿ ಎಂಬ ಆದೇಶಕ್ಕೆ ಕಂದಾಯ ಇಲಾಖೆಯಿಂದ ಸ್ಪಂದನವಿಲ್ಲ. ಈ ಮದ್ಯೆ ಹಕ್ಕುಪತ್ರಗಳಿಗಾಗಿ ಪರದಾಡುವ ಬಡವರಿವರಿಂದ ಹಣ ವಸೂಲಿಯ ಬ್ರಷ್ಟಾಚಾರದ ವರದಿಗಳು ಬರುತ್ತಿದ್ದು ಈ ಬಗ್ಗೆ ಸರಕಾರ ಮತ್ತು ಕಂದಾಯ ಇಲಾಖೆಯ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ ಕೋಟ ಶ್ರೀನಿವಾಸ ಪೂಜಾರಿಯವರು ಮುಂದಿನ ಹದಿನೈದು ದಿನಗಳಲ್ಲಿ ಈ ವ್ಯವಸ್ಥೆ ಸರಿಪಡಿಸದಿದ್ದಲ್ಲಿ ಜನವರಿ 1 ನೇ ತಾರಿಖು ಮತ್ತೆ ಮಿನಿವಿಧಾನಸೌದದ ಎದುರು ಧರಣಿ ಕೂರುವ ಎಚ್ಚರಿಕೆ ನೀಡಿದ್ರು. ಪ್ರತಿಭಟನೆಯಲ್ಲಿ ಭೂಮಿ ಹಕ್ಕುಪತ್ರ ವಂಚಿತರು, ವಿವಿಧ ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಉಪಸ್ಥಿತರಿದ್ದರು.