ಕರಾವಳಿ

ಹಸಿದವರಿಗೆ ಉಚಿತ ಆಹಾರ ನೀಡಲು 24 ಗಂಟೆಗಳ ಕಾಲ ಚಾಲನೆಯಲ್ಲಿರುವ ಫ್ರಿಡ್ಜ್

Pinterest LinkedIn Tumblr

araphath_food_fridgde

ಮಂಗಳೂರು, ಡಿ. 2: ನಗರದ ಜ್ಯೋತಿ ಬಳಿಯ ಕೈರನ್ನಾರ್ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ‘ಕೊಹಿನೂರ್ ಕಂಪ್ಯೂಟರ್ ರೆನ್’ ಎಂಬ ಅಂಗಡಿಯ ಮುಂದೆ ಫ್ರಿಡ್ಜ್ವೊಂದು ಕಂಡುಬಂದಿದೆ. 24 ಗಂಟೆಗಳ ಕಾಲ ಚಾಲನೆಯಲ್ಲಿರುವ ಈ ಫ್ರಿಡ್ಜ್ನಲ್ಲಿರುವ ಆಹಾರ ಪದಾರ್ಥಗಳನ್ನು ಅವಶ್ಯಕತೆ ಇರುವ ಸಾರ್ವಜನಿಕರು ಉಚಿತವಾಗಿ ಉಪಯೋಗಿಸಬಹುದು” ಎಂದೂ ಆಂಗ್ಲ ಹಾಗೂ ಕನ್ನಡ ಭಾಷೆಗಳಲ್ಲಿ ಫಲಕವೊಂದನ್ನು ಬರೆಯಲಾಗಿದೆ.

ಈ ಅಂಗಡಿಯ ಮಾಲಕ ತನ್ನದೇ ಖರ್ಚಿನಲ್ಲಿ ಊಟ, ಹಣ್ಣು ಹಂಪಲು, ಮಿನರಲ್ ವಾಟರ್ಗಳನ್ನು ಇಡುವ ಮೂಲಕ ಆಸ್ಪತ್ರೆಯ ರೋಗಿಗಳ, ಮುಂಜಾನೆ ತಲುಪುವ ಪ್ರಯಾಣಿಕರ, ಬಿಕ್ಷುಕರು ಸಹಿತ ಹಸಿದವರ ಮೇಲಿನ ಕಾಳಜಿಯನ್ನು ತೋರಿಸಿದ್ದಾರೆ. ಫ್ರಿಡ್ಜ್ನ ಎಡ ಹಾಗೂ ಬಲ ಬದಿಗಳಲ್ಲಿ ಕೆಲವು ಚಿತ್ರಗಳನ್ನು ಅಳವಡಿಸಲಾಗಿದ್ದು, ಇವು ಹೊಟ್ಟೆ ತುಂಬಾ ಉಂಡು ಉಳಿದ ಆಹಾರವನ್ನು ಬಿಸಾಡುವವರ ಗಮನ ಸೆಳೆಯಲಾಗಿದೆ. ಬಿಸಾಡಿದ ಆಹಾರವನ್ನು ಹಸಿದ ಹೊಟ್ಟೆಗಳು ಸೇವನೆ ಮಾಡುತ್ತಿರುವ ಚಿತ್ರಗಳು ಇನ್ನೊಂದೆಡೆ ಗಮನ ಸೆಳೆದಿದೆ.

araphath_food_fridgde1

ಮಂಗಳಾದೇವಿಯ ನಿವಾಸಿ ಅರಫಾತ್ (37) ಪ್ರಸ್ತುತ ಅಂಗಡಿಯ ಮಾಲಕ. ಅವರೇ ಹೇಳುವ ಪ್ರಕಾರ ”ದೂರದ ಪ್ರದೇಶದಿಂದ ನಗರದ ಆಸ್ಪತ್ರೆಗಳಿಗೆ ಬರುವವರು ಹಣವಿಲ್ಲದೆ, ಆಹಾರಕ್ಕಾಗಿ ಪರದಾಡಿದ್ದನ್ನು ಮತ್ತು ಹಣ ಇದ್ದವರು ತಡ ರಾತ್ರಿಯಲ್ಲಿ ಆಹಾರದ ಹುಡುಕಾಟ ನಡೆಸುತ್ತಿದ್ದುದನ್ನು ಗಮನಿಸಿದ್ದೇನೆ.

ನೂರಾರು ಕಿಲೋ ಮೀಟರ್ ಬಸ್ಸಿನಲ್ಲಿ ಪ್ರಯಾಣಿಸಿ ಬೆಳಗ್ಗಿನ ಜಾವ 3-4 ಗಂಟೆಗೆ ನಗರಕ್ಕೆ ತಲುಪುವ ಪ್ರಯಾಣಿಕರು ನೀರಿಗಾಗಿ ಅಲೆದಾಟ ನಡೆಸಿರುವುದನ್ನು ಕಂಡಿದ್ದೇನೆ. ಇವರಿಗೆಲ್ಲಾ ಉಪಯೋಗವಾಗುವ ನಿಟ್ಟಿನಲ್ಲಿ 24 ಗಂಟೆಯೂ ಅಂಗಡಿ ಮುಂದೆ ಫ್ರಿಡ್ಜ್ನ್ನು ಇಟ್ಟುಕೊಂಡು ಆಹಾರ ವಸ್ತುಗಳನ್ನು ತುಂಬಿಸಿದ್ದೇನೆ. ಇಂದು ಮಧ್ಯಾಹ್ನದ ಬಳಿಕ ತಲಾ ಒಬ್ಬರಿಗೊಂದರಂತೆ 7 ಬಿರಿಯಾನಿ ಪೊಟ್ಟಣ, 2 ಕೆ.ಜಿ. ಕಿತ್ತಳೆ ಹಣ್ಣು, 1 ಕೆ.ಜಿ. ಬಾಳೆ ಹಣ್ಣು, 7 ಚಿಕ್ಕ ಪ್ಯಾಕ್ಗಳ ಫ್ರೂಟಿ ಜ್ಯೂಸ್, ಅರ್ಧ ಲೀಟರ್ಗಳ 5 ಮಿನರಲ್ ವಾಟರ್, 1 ಲೀಟರ್ನ 2 ಮಿನರಲ್ ವಾಟರ್ ಮತ್ತು ಪಪ್ಪಾಯವನ್ನು ಇಟ್ಟಿದ್ದೇನೆ. ಮಧ್ಯಾಹ್ನ 3 ಗಂಟೆಗೆ ಇಡಲಾಗಿದ್ದ ಆಹಾರ ತಿನಿಸುಗಳು ಸಂಜೆ 7 ಗಂಟೆ ಹೊತ್ತಿಗೆ ಖಾಲಿಯಾಗಿವೆ”.

ಈ ಫ್ರಿಡ್ಜ್ನಲ್ಲಿ ಸಾರ್ವಜನಿಕರಿಗೂ ಆಹಾರ ವಸ್ತುಗಳನ್ನು ಇಡುವ ಅವಕಾಶವನ್ನು ಕಲ್ಪಿಸಲಾಗಿದೆ. ಯಾರಾದರೂ ಹಸಿದವರಿಗೆ ನೆರವಾಗಲು ಬಯಸಿದರೆ, ಸಾರ್ವಜನಿಕರಿಗಾಗಿ ಇಡಲಾಗಿದ್ದ ಈ ಫ್ರಿಡ್ಜ್ನಲ್ಲಿ ಆಹಾರವನ್ನು ಇಡಬಹುದು.

ಈ ಫ್ರಿಡ್ಜ್ ದುರುಪಯೋಗವಾಗದಂತೆ ಫ್ರಿಡ್ಜ್ನ ಮೇಲ್ಬದಿಯಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಿದ್ದೇನೆ. ಆಹಾರ ಉಪಯೋಗಿಸಬಯಸುವವರು ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಲಾಗಿದೆ. ಹಗಲು ಹೊತ್ತಿನಲ್ಲಿ ಭಿಕ್ಷುಕರು ಬಂದರೆ ಅವರು ನೇರವಾಗಿ ಫ್ರಿಡ್ಜ್ನೊಳಗೆ ಕೈ ಹಾಕದೆ ಅವರಿಗೆ ಬೇಕಾದ ಆಹಾರವನ್ನು ತೆಗೆಸಿಕೊಡುವಂತೆ ತನ್ನ ಅಂಗಡಿಯ ಸಿಬ್ಬಂದಿಗೆ ಸೂಚಿಸಿದ್ದೇನೆ ಎನ್ನುತ್ತಾರೆ ಅಂಗಡಿಯ ಮಾಲಕ ಅರಫಾತ್.

ಹಗಲಿರುಳು ಚಾಲನೆಯಲ್ಲಿರುವ ಈ ಫ್ರಿಡ್ಜ್ನ ವಿದ್ಯುತ್ ಖರ್ಚನ್ನು ನಾನೇ ಭರಿಸುತ್ತೇನೆ ಎನ್ನುವ ಅವರು, ನಾಗರಿಕರು ತಾವು ಸೇವಿಸುತ್ತಿರುವ ದೈನಂದಿನ ಆಹಾರದಲ್ಲಿ ಉಳಿದಿರುವುದನ್ನು ಬಿಸಾಡದೆ ಸಾರ್ವಜನಿಕರಿಗಾಗಿ ಇಡಲಾದ ಫ್ರಿಡ್ಜ್ನಲ್ಲಿ ಸಂಗ್ರಹಿಸಿ ಹಸಿದವರ ಹಸಿವನ್ನು ನೀಗಿಸಲು ಸಹಕರಿಸುವಂತೆ ಕೋರಿದ್ದಾರೆ.

Comments are closed.