ನೀವು ಸುಪರ್ ಮಾರ್ಕೆಟ್ ಗೆ ಹೋಗಿ ನಿಮಗೆ ಬೇಕಿದ್ದೆಲ್ಲವನ್ನೂ ಖರೀದಿಸಿ ನಿಮ್ಮ ಶಾಪಿಂಗ್ ಬ್ಯಾಗ್ ಹಿಡಿದುಕೊಂಡು ಹೊರ ನಡೆದರಷ್ಟೇ ಸಾಕು, ನೀವೇನೂ ಶಾಪಿಂಗ್ ಮಾಡಿದ್ದಕ್ಕೆ ಬಿಲ್ ಪಾವತಿಸುವ ಅಗತ್ಯವಿಲ್ಲ. ಕಾರ್ಡ್ ಸ್ವೈಪ್ ಮಾಡುವ ಅಗತ್ಯವಿಲ್ಲ. ಸುಮ್ಮನೇ ಹಾಗೆಯೇ ಮನೆಗೆ ಹಿಂದಿರುಗಬಹುದು.
ಹೇಗಂತೀರಾ ? ನೀವೇನು ಹಣ ಕೊಡದೆ ಸಾಮಾನು ಖರೀದಿಸಿಲ್ಲ. ಸೂಪರ್ ಮಾರ್ಕೆಟ್ ನಲ್ಲಿ ನಿಮ್ಮ ಇರುವಿಕೆಯನ್ನು ಗುರುತಿಸಿ, ನೀವು ಶಾಪಿಂಗ್ ಮಾಡಿದ ವಸ್ತುಗಳನ್ನು ಸ್ಕ್ಯಾನ್ ಮಾಡಿ ನಿಮ್ಮ ಖಾತೆಯಿಂದ ಬಿಲ್ ಹಣ ಸಂದಾಯ ಮಾಡುವ ತಂತ್ರಜ್ಞಾನವೊಂದು ಭವಿಷ್ಯದಲ್ಲಿ ಬರಲಿದೆ. ಇದು ಕ್ಯಾಶ್ ಲೆಸ್ ಮಾತ್ರವಲ್ಲ, ಕಾರ್ಡ್ ಲೆಸ್ ಪೇಮೆಂಟ್ ಕೂಡ ಹೌದು.
ಇಂತಹ ಒಂದು ತಂತ್ರಜ್ಞಾನ ಅಭಿವೃದ್ಧಿಗೊಂಡಾಗ ಅದು ಈಗಿನ ಪ್ಲಾಸ್ಟಿಕ್ ಕ್ರೆಡಿಟ್ ಕಾರ್ಡಿನ ಅಂತ್ಯ ಹಾಡಲಿದೆಯೆಂದು ಇಂಗ್ಲೆಂಡಿನಲ್ಲಿ 50 ವರ್ಷಗಳ ಹಂದೆ ಕ್ರೆಡಿಟ್ ಕಾರ್ಡ್ ಪ್ರಸ್ತುತ ಪಡಿಸಿದ ಬಾರ್ಕ್ ಲೇ ಕಾರ್ಡ್ ಸಂಸ್ಥೆಯ ಮುಖ್ಯ ಕಾಯನಿರ್ವಹಣಾಧಿಕಾರಿ ಅಮೆರ್ ಸಾಜೆದ್ ಹೇಳುತ್ತಾರೆ.
ಜನರು ಆನ್ ಲೈನ್ ಅಥವಾ ಆಫ್ ಲೈನ್ ಶಾಪಿಂಗ್ ಮಾಡಬಹುದು ಅಥವಾ ಆಯಪ್ ಮೂಲಕವೂ ಶಾಪಿಂಗ್ ಮಾಡಬಹುದು. ಆದರೆ ಇದರಿಂದ ಬ್ಯಾಂಕುಗಳು ಹಾಗೂ ತಂತ್ರಜ್ಞಾನ ಕಂಪೆನಿಗಳು ನಮ್ಮ ಡಿಜಿಟಲ್ ವಾಲೆಟ್ ಮೇಲೆ ನಿಯಂತ್ರಣ ಸಾಧಿಸಲು, ಸಮರ ಸಾರಲು ಆರಂಭಿಸುವವಲ್ಲದೆ ನಮ್ಮ ಖಾಸಗಿತನ ಹಾಗೂ ಸುರಕ್ಷತೆಯ ಬಗ್ಗೆ ಚರ್ಚೆಯೂ ಇದರಿಂದ ಆರಂಭಗೊಳ್ಳಬಹುದು.
ತಮ್ಮ ಕಂಪೆನಿಯ ಉದ್ಯೋಗಿಗಳಿಗೆಂದೇ ಇರುವ ಸ್ಥಳದಲ್ಲಿ ಅವರು ಚಿಪ್ ಇರುವ ಪ್ಲಾಸ್ಟಿಕ್ ಉಂಗುರು, ಬ್ರೇಸ್ ಲೆಟ್ ಹಾಗೂ ಕೀಚೈನ್ ತೋರಿಸುತ್ತಾರೆ ಹಾಗೂ ಇದರಿಂದ ವ್ಯಕ್ತಿಯೊಬ್ಬ ಯಾವುದೇ ಕಾರ್ಡ್ ಇಲ್ಲದೆಯೇ ಹಣ ಪಾವತಿಸಲು ಸಾಧ್ಯ ಎನ್ನುತ್ತಾರೆ. ಈ ತಂತ್ರಜ್ಞಾನವು ಗ್ರಾಹಕರನ್ನು ಅವರ ಕಣ್ಣುಗಳು ಯಾ ಬೆರಳಚ್ಚುಗಳಿಂದ ಅವರ ಸ್ಮಾರ್ಟ್ ಫೋನ್ ಮುಖಾಂತರ ಗುರುತಿಸಲಾಗುತ್ತದೆ ಹಾಗೂ ಗ್ರಾಹಕರು ಬಿಲ್ ಪಾವತಿಸಲು ಕ್ಯೂ ನಿಲ್ಲುವ ತಾಪತ್ರಯವನ್ನು ಇಲ್ಲವಾಗಿಸುತ್ತದೆ.
ಆದರೆ ಹ್ಯಾಕರುಗಳ ಹಾವಳಿಯಿರುವ ಇಂತಹ ಸಮಯದಲ್ಲಿ ಇಂತಹ ಒಂದು ತಂತ್ರಜ್ಞಾನದ ಅಭಿವೃದ್ಧಿಯಾದರೆ ಹೇಗಪ್ಪಾ ಎಂದು ಯೋಚಿಸುವವರೂ ಇದ್ದಾರೆ. ಆದರೆ ಈ ತಂತ್ರಜ್ಞಾನದಲ್ಲಿ ಯಾವುದೂ ಬಳಕೆದಾರನ ಅನುಮತಿಯಿಲ್ಲದೇ ನಡೆಯುವುದಿಲ್ಲ ಎಂದು ಸಾಜೆದ್ ಸ್ಪಷ್ಟಪಡಿಸುತ್ತಾರೆ